ರೈತರ ಪರವಾಗಿ ಹೋರಾಟ ಕೈಗೆತ್ತಿಕೊಂಡಿರುವ ಕಾಂಗ್ರೆಸ್‌ನ ಭಾವೀ ಪ್ರಧಾನಿ ರಾಹುಲ್ ಗಾಂಧಿ ಅವರು ಭಟ್ಟಾ-ಪರ್ಸಾಲ್‌ನಲ್ಲಿ ಜುಲೈ 9ರಂದು ನಡೆಸಲು ಉದ್ದೇಶಿಸಿರುವ 'ರೈತರ ಮಹಾ ಪಂಚಾಯತ್' ಸಮಾವೇಶಕ್ಕೆ ಉತ್ತರ ಪ್ರದೇಶದ ಮಾಯಾವತಿ ಸರಕಾರವು ಅನುಮತಿ ನಿರಾಕರಿಸಿದ್ದು, ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಡುವಣ ತಿಕ್ಕಾಟ ಮತ್ತೊಂದು ಮಗ್ಗುಲು ಹೊರಳಿಸಿದೆ.
ಈ ಗ್ರಾಮದಲ್ಲಿ ರಾಹುಲ್ ಗಾಂಧಿ ಬಂದಲ್ಲಿ ಕಾನೂನು ಸುವ್ಯವಸ್ಥೆಯು ಹದಗೆಡಬಹುದೆಂಬುದು ರಾಜ್ಯ ಸರಕಾರದ ಆತಂಕ. ಹೀಗಾಗಿ ಈ ಸಮಾವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಗ್ರಾಮೀಣ ಪ್ರದೇಶದ ಬದಲು ಯಾವುದಾದರೂ ಪಟ್ಟಣ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಸಮಾವೇಶವನ್ನು ಆಯೋಜಿಸಬಹುದಾಗಿದೆ ಎಂದು ಕೂಡ ಮಾಯಾವತಿ ಸರಕಾರವು ಸಲಹೆ ನೀಡಿದೆ.
ಭಟ್ಟಾ ಪರಸೂಲ್ ಪ್ರದೇಶದಲ್ಲಿ ಇತ್ತೀಚೆಗೆ ರೈತರು ತಮ್ಮಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ತೀರಾ ಕಡಿಮೆ ಬೆಲೆ ನೀಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಅಂದು ರೈತರು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟು, ಲಾಠಿ ಪ್ರಹಾರದವರೆಗೂ ಮುಟ್ಟಿತ್ತು. ನಂತರ ಅಲ್ಲಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಇಲ್ಲಿ ನೂರಾರು ಮಂದಿ ಸತ್ತಿದ್ದಾರೆ, ಮನೆಗಳು ಧ್ವಂಸಗೊಂಡಿವೆ, ಹೆಂಗಸರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದೆಲ್ಲಾ ಆರೋಪಿಸಿದ್ದರು. ಬಳಿಕ ಮಾನವ ಹಕ್ಕುಗಳ ಆಯೋಗವು ಈ ಕುರಿತು ತನಿಖೆ ನಡೆಸಿ, ಹಾಗೇನೂ ನಡೆದಿಲ್ಲ ಎಂದು ವರದಿ ಸಲ್ಲಿಸಿರುವುದು, ರಾಹುಲ್ ಗಾಂಧಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.