ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಭಿಪ್ರಾಯ ಬೇಕಿದ್ರೆ, ಲೋಕಪಾಲ ಕರಡು ಮಸೂದೆ ಕೊಡಿ: ಪ್ರತಿಪಕ್ಷ
(Lokpal Bill | All Party Meeting | Draft Bill | Congress | BJP)
ಅಭಿಪ್ರಾಯ ಬೇಕಿದ್ರೆ, ಲೋಕಪಾಲ ಕರಡು ಮಸೂದೆ ಕೊಡಿ: ಪ್ರತಿಪಕ್ಷ
ನವದೆಹಲಿ, ಸೋಮವಾರ, 4 ಜುಲೈ 2011( 12:16 IST )
ಲೋಕಪಾಲ ಕಾಯ್ದೆ ರೂಪಿಸುವ ಕುರಿತು ಭಾನುವಾರ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷಗಳು ಬಹುತೇಕ ಒಗ್ಗಟ್ಟು ಪ್ರದರ್ಶಿಸಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಫಾರೂಕ್ ಅಬ್ದುಲ್ಲಾ ಬಳಸಿದ ಭಾಷೆಯಿಂದ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಕೆರಳಿದ ಪ್ರಸಂಗವೂ ನಡೆಯಿತು.
ಮಸೂದೆ ಕುರಿತು ವಿವಿಧ ಪಕ್ಷಗಳ ಅಭಿಪ್ರಾಯ ಸಂಗ್ರಹಣೆಗಾಗಿ ಭಾನುವಾರ ಸಾಯಂಕಾಲ ಸಭೆ ಕರೆಯಲಾಗಿತ್ತು. ಸರಕಾರವು ಮಸೂದೆಯ ವಾಸ್ತವಿಕ ಕರಡನ್ನು ತಮ್ಮ ಮುಂದಿಡುವವರೆಗೂ ಅಭಿಪ್ರಾಯ ತಿಳಿಸುವುದು ಅಸಾಧ್ಯ ಎಂದು ಬಿಜೆಪಿ ಸಹಿತ ಹೆಚ್ಚಿನ ವಿರೋಧ ಪಕ್ಷಗಳು ಪಟ್ಟು ಹಿಡಿದವು.
ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ, ಭಾನುವಾರದ ಸಭೆಯಲ್ಲಿ ನಾವು ಮಸೂದೆಯ ವಿಧಿಗಳ ಬಗ್ಗೆ ಚರ್ಚೆ ಮಾಡಿಲ್ಲ. ಬಲಿಷ್ಠ ಲೋಕಪಾಲ ಕಾಯ್ದೆ ಬೇಕು ಎಂದು ಎಲ್ಲರೂ ಒತ್ತಾಯಿಸಿದೆವು. ಸರಕಾರವು ಮಸೂದೆ ಸಿದ್ಧಪಡಿಸಿ ಅದನ್ನು ಸ್ಥಾಯಿ ಸಮಿತಿಗೆ ಕಳುಹಿಸಲಿ. ಆಗ ಎಲ್ಲ ಪಕ್ಷಗಳೂ ತಮ್ಮ ಅಭಿಪ್ರಾಯ ತಿಳಿಸುವುದು ಸಾಧ್ಯವಾಗುತ್ತದೆ ಎಂದರು.
ಸಚಿವರು ತಯಾರಿಸಿದ ಕರಡು ಮಸೂದೆಯ ಅಂಶಗಳಿಗೂ ಬಿಜೆಪಿ ಅಪಸ್ವರ ಎತ್ತಿತು. ಲೋಕಪಾಲರನ್ನು ಯಾರು ಆರಿಸಬೇಕು, ಲೋಕಪಾಲದಲ್ಲಿ ಯಾರು ಸೇವೆ ಸಲ್ಲಿಸಬಹುಗದು ಮತ್ತು ಯಾರು ಲೋಕಪಾಲರನ್ನು ವಜಾಗೊಳಿಸಬಹುದು ಎಂಬಿತ್ಯಾದಿ ಅಂಶಗಳೆಲ್ಲವೂ ಸ್ವೀಕಾರಾರ್ಹವಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಸದ್ಯಕ್ಕೆ ಚರ್ಚಿಸಿರುವ ವಿಷಯವು ಸಚಿವರು ತಯಾರಿಸಿದ ಲೋಕಪಾಲ ಕರಡು ಮಸೂದೆ ಹಾಗೂ ಸಾಮಾಜಿಕ ಸಮಿತಿ ಸದಸ್ಯರು ತಯಾರಿಸಿದ ಜನ ಲೋಕಪಾಲ ಕರಡು ಮಸೂದೆ. ಸಚಿವರು ತಯಾರಿಸಿದ ಮಸೂದೆಯಿಂದ ಭ್ರಷ್ಟಾಚಾರ ನಿಯಂತ್ರಣ ಅಸಾಧ್ಯ ಎಂದು ಅಣ್ಣಾ ಹಜಾರೆ ಬಳಗದ ಆಕ್ಷೇಪ. ಆದರೆ, ಲೋಕಪಾಲರಿಗೆ ಕೆಲವೊಂದು ಅಧಿಕಾರಗಳನ್ನು ನೀಡಬೇಕೆಂಬ ಅಣ್ಣಾ ಬಳಗದ ಬೇಡಿಕೆಯು ಅಸಾಂವಿಧಾನಿಕ ಎಂಬುದು ಸರಕಾರದ ನಿಲುವು.
ಕೊನೆಗೆ ಸರ್ವಪಕ್ಷ ಸಭೆಯ ಜಂಟಿ ನಿರ್ಣಯದಲ್ಲಿ, 'ಸ್ಥಾಪಿತ ಕಾರ್ಯಚಟುವಟಿಕೆಗಳ ಆಧಾರದಲ್ಲಿ ಪ್ರಬಲ ಲೋಕಪಾಲ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸರ್ವಪಕ್ಷಗಳ ಸಭೆಯು ನಿರ್ಧರಿಸಿತು' ಎಂದು ನಮೂದಿಸಲಾಯಿತು.
ಈ ಸಭೆಯ ಕುರಿತು ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ ಅವರ ಅನುಯಾಯಿ ಕಿರಣ್ ಬೇಡಿ ಅವರು, ಸರಕಾರವು ಸಭೆಗೆ ಯಾವುದೇ ತಯಾರಿ ನಡೆಸದೆ ಹೋಗಿದೆ. ಮೊದಲು ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡು ಅವರು ಸರ್ವಪಕ್ಷ ಸಭೆ ಕರೆಯಬೇಕಿತ್ತು ಎಂದು ಹೇಳಿದ್ದಾರೆ.
ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಗೆ ತರುವ ಬಗ್ಗೆ ಪ್ರತಿಪಕ್ಷಗಳಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಎಡಪಕ್ಷಗಳು ಹಾಗೂ ಡಿಎಂಕೆ ಇದನ್ನು ಬೆಂಬಲಿಸುತ್ತಿದ್ದರೆ, ಟಿಆರ್ಎಸ್, ಶಿರೋಮಣಿ ಅಕಾಲಿ ದಳ ಹಾಗೂ ಎಐಎಡಿಎಂಕೆಗಳು ವಿರೋಧಿಸುತ್ತಿವೆ. ಮುಂದೆ ಸಂಸತ್ತಿನಲ್ಲಿ ಯಾವ ಮಸೂದೆ ಮಂಡನೆಯಾಗಲಿದೆ ಎಂಬುದು ಎಲ್ಲರ ಕುತೂಹಲ. ಇದರೊಂದಿಗೆ, ಅಣ್ಣಾ ಹಜಾರೆ ಅವರು ಆಗಸ್ಟ್ 16ರಿಂದ ಆಮರಣಾಂತ ಉಪವಾಸ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ.