ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಸ್.ಎಂ.ಕೃಷ್ಣ ವಿಂಬಲ್ಡನ್ ವೀಕ್ಷಿಸಿದ್ದು ಸರ್ಕಾರಿ ವೆಚ್ಚದಲ್ಲೇ? (SM Krishna | Wimbledon | Minister of Foreign Affairs | UPA)
ಎಸ್.ಎಂ.ಕೃಷ್ಣ ವಿಂಬಲ್ಡನ್ ವೀಕ್ಷಿಸಿದ್ದು ಸರ್ಕಾರಿ ವೆಚ್ಚದಲ್ಲೇ?
ನವದೆಹಲಿ, ಮಂಗಳವಾರ, 5 ಜುಲೈ 2011( 09:04 IST )
ವಿದೇಶಾಂಗ ಖಾತೆ ಸಚಿವ ಪದವಿಯ ಕಾರ್ಯನಿರ್ವಹಣೆಯು ಹಲವಾರು ಬಾರಿ ಟೀಕೆಗೊಳಗಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ತೆರಿಗೆದಾರನ ಖರ್ಚಿನಲ್ಲಿ ಅವರು ವಿಂಬಲ್ಡನ್ ಟೆನಿಸ್ ನೋಡಲು ಹೋಗಿದ್ದಾರೆ ಎಂಬುದು ಹೊಸ ಆರೋಪ.
ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ಜೊತೆ ಮಾತುಕತೆಗಾಗಿ ಕೃಷ್ಣ ಅವರು ಐದು ದಿನಗಳ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಮಾತುಕತೆಗಳು ಗುರುವಾರವೇ ಮುಗಿದಿದ್ದು, ಕೃಷ್ಣ ಅವರು ಇನ್ನೂ ಮೂರು ದಿನ ಅಲ್ಲೇ ಉಳಿದುಕೊಂಡು, ಜುಲೈ 1ರಂದು ನಡೆದ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ ವೀಕ್ಷಿಸಿದರು.
ಕೃಷ್ಣ ಅವರ ಅಧಿಕೃತ ಪ್ರವಾಸ ವಿಸ್ತರಣೆಗೆ ಪ್ರಧಾನಿ ಕಾರ್ಯಾಲಯವು ಅನುಮತಿ ನೀಡಿದೆ. ಈಗಾಗಲೇ ಕೇಂದ್ರ ಸಂಪುಟ ಪುನಾರಚನೆಯಾಗುತ್ತಿದ್ದು, ಕೃಷ್ಣ ಅವರ ಎತ್ತಂಗಡಿಯಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿರುವ ಈ ಹಂತದಲ್ಲಿ ಅವರು ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ವಿಶೇಷ.
ಕೃಷ್ಣ ಸ್ಪಷ್ಟನೆ: ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಎಸ್.ಎಂ.ಕೃಷ್ಣ, ತಾನು ಸರಕಾರಿ ವೆಚ್ಚದಲ್ಲಿ ಮೂರು ದಿನ ಹೆಚ್ಚುವರಿಯಾಗಿ ಇಂಗ್ಲೆಂಡ್‌ನಲ್ಲಿ ಉಳಿದುಕೊಂಡಿರಲಿಲ್ಲ. ಸ್ವಂತ ಖರ್ಚಿನಲ್ಲೇ ಹೋಟೆಲ್ ಬಿಲ್ ಪಾವತಿಸಿರುವುದಾಗಿ ತಿಳಿಸಿದ್ದಾರೆ.
ತಾನೊಬ್ಬ ಕಟ್ಟಾ ಟೆನಿಸ್ ಅಭಿಮಾನಿಯಾಗಿದ್ದು, ತಾನು ಅಖಿಲ ಭಾರತ ಲಾನ್ ಟೆನಿಸ್ ಒಕ್ಕೂಟದ ಆಜೀವ ಅಧ್ಯಕ್ಷನಾಗಿದ್ದೇನೆ. ಕರ್ನಾಟಕ ಟೆನಿಸ್ ಒಕ್ಕೂಟದ ಅಧ್ಯಕ್ಷನಾಗಿಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ಹೀಗಾಗಿ ವಿಂಬಲ್ಡನ್ ಪಂದ್ಯ ನೋಡಲು ಹೋಗಿದ್ದು ಅಸಹಜವೇನಲ್ಲ. ಅಲ್ಲದೆ ಸ್ವತಃ ನಾನೂ ಟೆನಿಸ್ ಆಟಗಾರನೇ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.