ರಾಹುಲ್‌ಗೆ 'ರಾಮಲೀಲಾ' ಸಂತ್ರಸ್ತರ ಬಗ್ಗೆ ಕನಿಕರವೇಕಿಲ್ಲ: ಬಿಜೆಪಿ
ನವದೆಹಲಿ, ಮಂಗಳವಾರ, 5 ಜುಲೈ 2011( 19:11 IST )
ಉತ್ತರ ಪ್ರದೇಶದಲ್ಲಿ ಮಾತ್ರವೇ ರೈತರ ಪರಿಸ್ಥಿತಿ ಬಗ್ಗೆ ಕಳಕಳಿ ತೋರಿಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ನಿರತರ ಮೇಲೆ ನಡೆದ ಪೊಲೀಸ್ ದೌರ್ಜನ್ಯದಲ್ಲಿ ನೋವುಂಡವರ ಸಾಂತ್ವನಕ್ಕೆ ಬಾರದೆ ತಮ್ಮ "ದ್ವಿಮುಖ ನೀತಿ"ಯನ್ನು ತೋರಿಸಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ, ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಹುಜನ ಸಮಾಜ ಪಕ್ಷದ ಮೇಲೆ ದಾಳಿ ನಡೆಸುತ್ತಿರುವ ಕಾಂಗ್ರೆಸ್, ದೆಹಲಿಯಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳಲು ಬಿಎಸ್ಪಿಯ ಸಹಾಯಕ್ಕೆ ಅಂಟಿಕೊಂಡಿರುವುದು "ವ್ಯಂಗ್ಯ" ಎಂದರು.
ರಾಹುಲ್ ಗಾಂಧಿಯ ಕಳಕಳಿಯು ಕೇವಲ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದೇಕೆ? ಬೇರೆಡೆಗಳಲ್ಲಿಯೂ, ವಿಶೇಷವಾಗಿ ದೆಹಲಿಯಲ್ಲಿ ಅವರ ಮನ ಮಿಡಿಯಲಿಲ್ಲವೇಕೆ? ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಲಿ ಎಂದು ರೂಡಿ ಹೇಳಿದರು.
ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ನೋಯಿಡಾದ ಭಟ್ಟಾ-ಪರ್ಸಾಲ್ ಗ್ರಾಮಗಳಿಗೆ ಎರಡನೇ ಬಾರಿಗೆ ಭೇಟಿ ನೀಡಿ ರೈತರ ಬಗ್ಗೆ ಕಳಕಳಿ ತೋರಿಸುತ್ತಿರುವುದನ್ನು ಉಲ್ಲೇಖಿಸಿ ರೂಡಿ ಪ್ರತಿಕ್ರಿಯಿಸುತ್ತಿದ್ದರು.