ದಯವಿಟ್ಟು ಮಧ್ಯಾಹ್ನ 2 ಗಂಟೆಯ ನಂತರ ಬನ್ನಿ, ನಾನು "ಬೋಣಿ"ಗೇ ಕಳವು ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ ಎಂದು ಪೊಲೀಸ್ ಕಾನ್‌ಸ್ಟೇಬಲ್ ಹೇಳಿದಾಗ ಮೊಬೈಲ್ ಕಳೆದುಕೊಂಡಾತ ಹೌಹಾರಿದ್ದ. ವ್ಯಾಪಾರ ವಹಿವಾಟು ಆರಂಭಿಸುವಾಗ ಒಳ್ಳೆಯ ಸಮಯ, ಕಾಲ ನೋಡುವಂತೆಯೇ, ಪ್ರಕರಣ ದಾಖಲಿಸಿಕೊಳ್ಳುವಾಗಲೂ ಈ ನೀತಿ ಅನುಸರಿಸಿದ್ದು ಚಂಡೀಗಢದ ಪಿಜಿಐ ಠಾಣೆಯಲ್ಲಿ!
ಆದದ್ದಿಷ್ಟು: ಲೆಫ್ಟಿನೆಂಟ್ ಕರ್ನಲ್ ಆರ್.ಕೆ. ಸೈನಿ ಅವರನ್ನು ಜುಲೈ 3ರಂದು ಪಿಜಿಐನ ನೆಹರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಬಳಿ ಇದ್ದ ಮೊಬೈಲನ್ನು ಯಾರೋ ಕಳವು ಮಾಡಿದ್ದರು. ಸೈನಿ ಅವರ ಸಂಬಂಧಿ ಅಮನ್ದೀಪ್ ಸೈನಿ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹೋದಾಗ ಕಾನ್‌ಸ್ಟೇಬಲ್ ದೂರು ತೆಗೆದುಕೊಳ್ಳಲು ನಿರಾಕರಿಸಿದ್ದಾನೆ. ಬೆಲೆಬಾಳುವ ಮೊಬೈಲ್ ಕಳವಾಗಿದ್ದು, ನೀವೇನಾದರೂ ತಕ್ಷಣ ಕ್ರಮ ಕೈಗೊಂಡರೆ ಸಿಗಬಹುದು ಎಂದು ಸೈನಿ ಹೇಳಿದರೂ, ನೀವು ಮಧ್ಯಾಹ್ನ ಬನ್ನಿ ಎಂದು ಆತ ಹೇಳಿರುವುದಾಗಿ ಸೈನಿ ತಿಳಿಸಿದ್ದಾರೆ.
ರೋಗಿಯ ಹಾಸಿಗೆಯ ಬಳಿ ಇದ್ದ ಮೊಬೈಲ್ ಬೆಳಗ್ಗೆ 5 ರಿಂದ 5.30ರ ಸಮಯದಲ್ಲೇ ಕಳವಾಗಿದ್ದರೂ ಪೊಲೀಸರ ಮೂಢ ನಂಬಿಕೆಯಿಂದಾಗಿ ಕೂಡಲೇ ದೂರು ದಾಖಲಿಸಲು ಸಾಧ್ಯವಾಗಲೇ ಇಲ್ಲ.
ಮೊಬೈಲ್ ಕಳವಿನ ಕುರಿತು ದೂರು ದಾಖಲಿಸಿಕೊಳ್ಳಲು ಕಾನ್‌ಸ್ಟೇಬಲ್ ನಿರಾಕರಿಸಿದ ಬಗ್ಗೆ ಪ್ರಭಾರ ಸಬ್ ಇನ್ಸ್‌ಪೆಕ್ಟರ್ ಇಮ್ರಾನ್ ರಿಜ್ವಿ ಅವರ ಗಮನಕ್ಕೆ ತಂದಾಗ, ಅವರು ದೂರು ತೆಗೆದುಕೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಮೊಬೈಲ್ ಕಳವಿನ ಕುರಿತ ದೂರು ಸತ್ಯಾಂಶದಿಂದ ಕೂಡಿದ್ದು, ಕಳವಾಗಿರುವ ಮೊಬೈಲ್‌ನ ಐಎಂಇಐ ಸಂಖ್ಯೆಯ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ. ದಿನ ನಿತ್ಯದ ಬೆಳವಣಿಗೆಗಳ ಕುರಿತ ವರದಿ (ಡಿಡಿಆರ್)ನಲ್ಲಿ ಈ ಪ್ರಕರಣದ ಕುರಿತು ದಾಖಲಾಗಿದ್ದು, ಇದರ ಪ್ರತಿಯನ್ನು ದೂರು ದಾಖಲಿಸಿದವರಿಗೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.