ಪಶ್ಚಿಮ ಬಂಗಳಾದ ಹೌರಾದಿಂದ ನಿನ್ನೆ ದೆಹಲಿಯತ್ತ ಹೊರಟಿದ್ದ ಹೌರಾ-ಕಾಲ್ಕಾ ಮೇಲ್ ಉತ್ತರಪ್ರದೇಶದ ಫಾಟೇಪುರ್ ಜಿಲ್ಲೆಯ ಮಲ್ವಾ ಸ್ಟೇಷನ್ ಬಳಿ ಹಳಿತಪ್ಪಿದ್ದು, ಹಲವರ ಸಾವಿನ ಶಂಕೆ ಎದುರಾಗಿದೆ.
ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟ ಶಂಕೆಯಿದ್ದು, 100ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. . ಈ ನಡುವೆ 20 ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರೈಲು 105 ಕಿ. ಮೀ ವೇಗದಲ್ಲಿ ಸಂಚರಿಸುತ್ತಿತ್ತು ಎನ್ನಲಾಗುತ್ತಿದ್ದು, ಮಧ್ಯಾಹ್ನ 12.30ಕ್ಕೆ ಸುಮಾರಿಗೆ ವಿವೇಚನೆಯಿಲ್ಲದೆ ಏಕಾಏಕಿ ಎಮರ್‌ಜೆನ್ಸಿ ಬ್ರೇಕ್ ಹಾಕಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಮೂರು ಎಸಿ, ಐದು ಸ್ಲೀಪರ್ ಹಾಗೂ ಎರಡು ಜನರಲ್ ಕೋಚ್ ಸೇರಿದಂತೆ ಒಟ್ಟು 13 ಬೋಗಿಗಳು ಹಳಿತಪ್ಪಿವೆ.
ಇದೀಗ ರೈಲ್ವೇ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನೆರವಿಗಾಗಿ ಎರಡು ಹೆಚ್ಚುವರಿ ರೈಲನ್ನು ಸ್ಥಳಕ್ಕೆ ರವಾನಿಸಲಾಗಿದೆ. ಅಲ್ಲದೆ ಗಾಯಳುಗಳಿಗೆ ಅಂಬುಲೆನ್ಸ್ ನೆರವಿನಿಂದ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕುರಿತಾಗಿ ತನಿಖೆಗೆ ಆದೇಶಿಸಲಾಗಿದೆ.