ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಸಲೀಲೆ ವೀಡಿಯೊ: ಸನ್ ಟಿವಿ ಮೇಲೆ ರಂಜಿತಾ ದೂರು (Nityananda Swamy | Sun TV | Actress Ranjitha | Morphed Video)
PTI
ದೇವಮಾನವ ಸ್ವಾಮಿ ನಿತ್ಯಾನಂದ ಜೊತೆ ಅಸಭ್ಯ ಭಂಗಿಯಲ್ಲಿ ತಾನಿರುವಂತೆ ನಕಲಿ ಚಿತ್ರ-ವೀಡಿಯೊಗಳನ್ನು ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಂಜಿತಾ ಇದೀಗ ಸನ್ ನೆಟ್ವರ್ಕ್, ತಮಿಳು ದೈನಿಕ ದಿನಕರನ್ ಹಾಗೂ ನಕ್ಕೀರನ್ ಪತ್ರಿಕೆಗಳ ವಿರುದ್ಧ ಚೆನ್ನೈ ಪೊಲೀಸ್ ಕಮಿಶನರ್‌ಗೆ ದೂರು ಸಲ್ಲಿಸಿದ್ದಾರೆ. ಡಿಎಂಕೆ ಒಡೆತನದ ಸನ್ ನೆಟ್ವರ್ಕ್ ವಿರುದ್ಧದ ಈ ಕ್ರಮಕ್ಕೆ ಮುಖ್ಯಮಂತ್ರಿ, ರಾಜಕೀಯ ಬದ್ಧವೈರಿ ಜೆ.ಜಯಲಲಿತಾ ಅವರ ಕುಮ್ಮಕ್ಕು ಕೂಡ ಇರುವುದನ್ನು ತಳ್ಳಿ ಹಾಕುವಂತಿಲ್ಲ.

ಈ ವೀಡಿಯೊಗಳನ್ನು ಪ್ರಸಾರ ಮಾಡದಿರಬೇಕಾದರೆ ಹಣ ನೀಡಬೇಕು ಎಂದು ಈ ಮಾಧ್ಯಮಗಳು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದವು ಎಂದು ನಟಿ ರಂಜಿತಾ ಅವರು ಯಾರನ್ನೂ ಹೆಸರಿಸದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ರಂಜಿತಾ ಸರಕಾರವನ್ನು ಆಗ್ರಹಿಸಿದ್ದಾರೆ. "ನಾನೇನಾದರೂ ಚೆನ್ನೈಗೆ ಬಂದರೆ ನನ್ನನ್ನು ಬಂಧಿಸಲಾಗುತ್ತದೆ ಎಂದವರು ನನಗೆ ಬೆದರಿಕೆಯೊಡ್ಡಿದ್ದರು. ಬ್ರಿಟನ್‌ನಲ್ಲಿ ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಅಲ್ಲಿನ ಪತ್ರಿಕೆಯೊಂದನ್ನು ಎಲ್ಲರೂ ಖಂಡಿಸುತ್ತಿದ್ದರೆ, ಇಲ್ಲಿ ತನಿಖಾ ಪತ್ರಿಕೋದ್ಯಮ ನೆಪದಲ್ಲಿ ಅವರು ಆಶ್ರಮದೊಳಗೆ ಕ್ಯಾಮರಾಗಳನ್ನು ಇರಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ" ಎಂದು ರಂಜಿತಾ ದೂರಿದ್ದಾರೆ.

ದೂರು ನೀಡಲು ವಿಳಂಬ ಮಾಡಿದ್ದೇಕೆ ಎಂದು ಪತ್ರಕರ್ತರು ಕೇಳಿದಾಗ, ಹಿಂದಿನ (ಡಿಎಂಕೆ) ಸರಕಾರವು ಈ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನನಗಿರಲಿಲ್ಲ. (ಸನ್ ನೆಟ್ವರ್ಕ್ ಡಿಎಂಕೆ ಅಧ್ಯಕ್ಷ ಕರುಣಾನಿಧಿಯವರ ಸೋದರಳಿಯನ ಮಗ ಕಲಾನಿಧಿ ಮಾರನ್ ಒಡೆತನದ್ದು.) ಈಗ ಸರಕಾರ ಬದಲಾಗಿರುವುದರಿಂದ ದೂರು ನೀಡುವ ಧೈರ್ಯ ಬಂದಿದೆ. ಯಾವುದೇ ರಾಜಕೀಯ ಬೆಂಬಲವಿಲ್ಲದ ಸಾಮಾನ್ಯ ವ್ಯಕ್ತಿ ನಾನು. ಈ ಹಿಂದೆಯೇನಾದರೂ ದೂರು ನೀಡಿದ್ದರೆ, ಪೊಲೀಸರು ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳಬಹುದು ಎಂದು ಆಪ್ತರು ನನಗೆ ಸಲಹೆ ನೀಡಿದ್ದರು ಎಂದು ರಂಜಿತಾ ವಿವರಿಸಿದರು.


ತಕ್ಷಣವೇ ಈ ವಿಷಯದ ಬಗ್ಗೆ ಗಮನ ಹರಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮುಖ್ಯಮಂತ್ರಿ ಜಯಲಲಿತಾರನ್ನು ಒತ್ತಾಯಿಸಿದರು. ಜಯಲಲಿತಾ ಮತ್ತು ಡಿಎಂಕೆಗಿರುವ ವೈರತ್ವವು ಜನಜನಿತವಾಗಿರುವುದರಿಂದ ಸನ್ ನೆಟ್ವರ್ಕ್‌ನ ಮಾರನ್ ಈಗ ಸಂಕಷ್ಟದಲ್ಲಿ ಸಿಲುಕಲಿದ್ದಾರೆ.

ಬಿಡದಿ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಮತ್ತು ರಂಜಿತಾ ಅಶ್ಲೀಲ ಭಂಗಿಯಲ್ಲಿದ್ದ ವೀಡಿಯೊಗಳು ವಾಹಿನಿಗಳಲ್ಲಿ, ಇಂಟರ್ನೆಟ್‌ನಲ್ಲಿ ಹರಿದಾಡಲಾರಂಭಿಸಿದ ತಕ್ಷಣವೇ 2010ರ ಮಾರ್ಚ್ 3ರಂದು ರಂಜಿತಾ ಈ ದೇಶವನ್ನೇ ಬಿಟ್ಟು ಹೋಗಿದ್ದರು. ಈ ವಿವಾದಾತ್ಮಕ ವೀಡಿಯೊ ಬಿಡುಗಡೆಯಾದ ಹಿನ್ನೆಲೆಯಲ್ಲಿ ತನ್ನ ಜೀವಕ್ಕೆ ಅಪಾಯವಿತ್ತು, ಹೀಗಾಗಿ ವಿದೇಶಕ್ಕೆ ಹೋಗಿದ್ದೆ ಎಂದು ಆ ಬಳಿಕ ರಂಜಿತಾ ಸ್ಪಷ್ಟನೆ ನೀಡಿದ್ದರು.

ಈಗಾಗಲೇ ನಿತ್ಯಾನಂದ ಆಶ್ರಮದ ಕಡೆಯಿಂದಲೂ ಸನ್ ಟಿವಿ ನೆಟ್ವರ್ಕ್ ಸಿಒಒ ಹನ್ಸರಾಜ್ ಸಕ್ಸೇನಾ ಹಾಗೂ ಕಲಾನಿಧಿ ಮಾರನ್ ವಿರುದ್ಧ ದೂರು ದಾಖಲಾಗಿದೆ. ಇದಲ್ಲದೆ, ಇನ್ನೂ ಎರಡು ವಂಚನೆ ಪ್ರಕರಣಗಳು ಸನ್ ನೆಟ್ವರ್ಕ್ ವಿರುದ್ಧ ದಾಖಲಾಗಿದ್ದು, ಪೊಲೀಸರು ಸಕ್ಸೇನಾರನ್ನು ಬಂಧಿಸಿದ್ದರೆ, ಕಲಾನಿಧಿ ಮಾರನ್ ಅವರನ್ನೂ ವಿಚಾರಣೆಗೆ ಗುರಿಪಡಿಸಿದ್ದಾರೆ. ಇದಲ್ಲದೆ, ನಿತ್ಯಾನಂದ ಆಶ್ರಮದ ಭಕ್ತರು, ಈಗಾಗಲೇ ಸನ್ ನೆಟ್ವರ್ಕ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಕ್ತದಲ್ಲಿ ಸಹಿ ಅಭಿಯಾನವನ್ನೂ ಆರಂಭಿಸಿದ್ದು, ಅದನ್ನು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಒಪ್ಪಿಸುವ ಸಿದ್ಧತೆ ನಡೆಸಿದ್ದಾರೆ.
ಇವನ್ನೂ ಓದಿ