ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಲಿಪಶು ಅಲ್ಲ, ಹೊಸ ಖಾತೆ ತೃಪ್ತಿ: ಉಲ್ಟಾ ಹೊಡೆದ ಮೊಯ್ಲಿ (Veerappa Moily | Corporate Affairs | Prime Minister | Sonia Gandh | vested interests)
PTI
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸಿದ ತಂತ್ರವಿದು, ಯಾವುದೋ ಸಚಿವಾಲಯ ಎಸಗಿದ ತಪ್ಪಿಗೆ ತಾನು ಬಲಿಪಶುವಾಗಿ ಕಾನೂನು ಖಾತೆಯಿಂದ ಎತ್ತಂಗಡಿಯಾಗಿದೆ ಎಂದು ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಹೊಸ ವೀರಪ್ಪ ಮೊಯ್ಲಿ, ಇದೀಗ ತಮಗೆ ನೀಡಿದ ಖಾತೆಯಿಂದ ಸಂತುಷ್ಟವಾಗಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ.

ಕಾನೂನು ಸಚಿವಾಲಯದಿಂದ ಕಾರ್ಪೋರೇಟ್‌ ಸಚಿವಾಲಯಕ್ಕೆ ಎತ್ತಂಗಡಿ ಮಾಡಿರುವುದು ಹಿಂಬಡ್ತಿ ನೀಡಿದಂತಾಗುವುದಿಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮೊಯ್ಲಿ, ಹಿಂಬಡ್ತಿ ಎಂದಾಗಿದ್ದಲ್ಲಿ ಸಚಿವ ಸ್ಥಾನದಿಂದಲೇ ಕಿತ್ತು ಹಾಕುತ್ತಿದ್ದರು ಎಂದರು.

ನಾನೊಬ್ಬ "ಸುಧಾರಣಾವಾದಿ" ಎಂದು ಪ್ರಧಾನಮಂತ್ರಿ ಹಾಗೂ ಸೋನಿಯಾ ಗಾಂಧಿಯವರಿಗೆ ತಿಳಿದಿದೆ. ಅಂತಹ ನಂಬಿಕೆ ಮತ್ತು ಪ್ರಾಮಾಣಿಕತೆಯಿಂದಾಗಿ, ಹೊಸ ಖಾತೆಯನ್ನು ನೀಡಲಾಗಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಮೊಯ್ಲಿ ಹೇಳಿದರು.

ಮಂಗಳವಾರ ಸಂಪುಟ ಪುನಾರಚನೆ ಘೋಷಣೆಯಾಗಿ ಕಾನೂನು ಖಾತೆಯಿಂದ ಕಾರ್ಪೋರೇಟ್ ಖಾತೆಗೆ ವರ್ಗಾಯಿಸಿರುವುದರಿಂದ ಅಸಮಾಧಾನ ವ್ಯಕ್ತಪಡಿಸಿದ್ದ ಮೊಯ್ಲಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸಿದ ಅಪಪ್ರಚಾರಕ್ಕೆ ತಾವು ಬಲಿಪಶುವಾಗಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ, ಮಂಗಳವಾರದಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿ, ತಾವು ಯಾವುದೇ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ ಎಂದು ನುಣುಚಿಕೊಂಡಿದ್ದರು.

ಕಾರ್ಪೋರೇಟ್ ಖಾತೆಯನ್ನು ಇದೀಗ ವಹಿಸಿಕೊಂಡಿದ್ದೇನೆ. ಈ ಖಾತೆ ನನಗೆ ಹೊಸದಲ್ಲ. ಕಾನೂನು ಸಚಿವನಾಗಿದ್ದಾಗ ಹಲವಾರು ಪ್ರಸ್ತಾವನೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಕಾರ್ಪೋರೇಟ್ ಖಾತೆ ದೇಶದ ಭವಿಷ್ಯವನ್ನು ರೂಪಿಸುವಂತಹುದಾಗಿದೆ. ಪ್ರಸ್ತುತವಿರುವ ಸವಾಲುಗಳನ್ನು ಎದುರಿಸಲು ನೂತನ ಮಸೂದೆಯ ಕರಡು ಸಿದ್ಧವಾಗಿದೆ, ಅದನ್ನು ಆದಷ್ಟು ಶೀಘ್ರವಾಗಿ ಕಾನೂನು ರೂಪಕ್ಕಿಳಿಸುವ ಗುರಿ ನನ್ನ ಮುಂದಿದೆ. ದೇಶದ ಅಭಿವೃದ್ಧಿಯಲ್ಲಿ ಸಚಿವಾಲಯ ಮಹತ್ತರ ಪಾತ್ರವಹಿಸಲಿದೆ. ಕಾರ್ಪೋರೇಟ್ ಅಡಳಿತ ಪ್ರಾಮುಖ್ಯತೆಯನ್ನು ಪಡೆದಿರುವುದರಿಂದ ಸಂಪೂರ್ಣವಾಗಿ ಗಮಹರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಮಾನವನ್ನು ದೇಶ ವಿದೇಶಗಳಲ್ಲಿ ಹರಾಜು ಹಾಕಿದ ಟೆಲಿಕಾಂ ಪ್ರಕರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳನ್ನು ನಿಭಾಯಿಸುವಲ್ಲಿ ಕಾನೂನು ಸಚಿವಾಲಯ ವೈಫಲ್ಯ ಕಂಡಿರುವುದರಿಂದ ಕಾನೂನು ಸಚಿವಾಲಯದಿಂದ ಮೊಯ್ಲಿ ಎತ್ತಂಗಡಿಗೆ ಕಾರಣವಾಗಿದೆ ಎನ್ನಲಾಗಿದೆ. ಹಲವು ಹಗರಣಗಳಲ್ಲಿ ಕೇಂದ್ರಕ್ಕೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆಯಾಗಿತ್ತು.

ಏತನ್ಮಧ್ಯೆ, ಕಾನೂನಿನಲ್ಲಿ ಕೆಲ ಸುಧಾರಣೆಗಳನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂಚು ನಡೆಸಿದ್ದು, ನ್ಯಾಯಾಲಯದಲ್ಲಿ ಸರಕಾರದ ಹಿನ್ನಡೆಗೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಬೇರೆ ಸಚಿವಾಲಯಗಳು ನಡೆಸಿದ ಭ್ರಷ್ಟಾಚಾರಗಳಿಗೆ ಕಾನೂನು ಸಚಿವಾಲಯವನ್ನು ಹೊಣೆಯನ್ನಾಗಿಸಿವೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಕಾನೂನು ಸಚಿವಾಲಯವು ನ್ಯಾಯಾಲಯದಲ್ಲಿ ಸರಕಾರದ ಮುಖವಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ