ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೋರ್ಟಿನಲ್ಲಿ ಕೇಸಿದೆ, ಹೊಸ ಸಿವಿಸಿ ಬೇಡ: ರಾಷ್ಟ್ರಪತಿಗೆ ಥಾಮಸ್ (CVC | PJ Thomas | Pradeep Kumar | Pratibha Patil)
PTI
ಕೇಂದ್ರ ಜಾಗೃತ ದಳದ ನೂತನ ಆಯುಕ್ತರಾಗಿ (ಸಿವಿಸಿ) ಪ್ರದೀಪ್ ಕುಮಾರ್ ಅಧಿಕಾರ ಸ್ವೀಕರಿಸಲು ಕೇವಲ ಒಂದು ದಿನವಿರುವಂತೆ, ದೆಹಲಿ ಉಚ್ಚ ನ್ಯಾಯಾಲಯದಲ್ಲಿ ತಾವು ಸಲ್ಲಿಸಿದ ಅರ್ಜಿಯ ವಿಚಾರಣೆಯ ಫಲಿತಾಂಶ ಹೊರಬರುವವರೆಗೆ ನೂತನ ಆಯುಕ್ತರ ನೇಮಕವನ್ನು ತಡೆ ಹಿಡಿಯುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್‌ ಅವರಿಗೆ ಮಾಜಿ ಸಿವಿಸಿ ಪಿ.ಜೆ .ಥಾಮಸ್ ಮನವಿ ಮಾಡಿದ್ದಾರೆ.

ಹೈಕೋರ್ಟ್‌ನಲ್ಲಿ ನಮ್ಮ ಕಕ್ಷಿದಾರ ಸಲ್ಲಿಸಿದ ಅರ್ಜಿ ವಿಚಾರಣೆ ಇತ್ಯರ್ಥವಾದ ನಂತರ, ನೂತನ ಸಿವಿಸಿಯನ್ನು ಸರಕಾರ ನೇಮಕ ಮಾಡಬಹುದು. ಯಾರಿಗೂ ಅನ್ಯಾಯವಾಗಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಥಾಮಸ್ ಪರ ವಕೀಲ ವಿಲ್ಸ್‌ ಮ್ಯಾಥ್ಯೂ ಹೇಳಿದ್ದಾರೆ.

ಇತ್ತೀಚೆಗೆ ಸಭೆ ಸೇರಿದ್ದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾಸ್ವರಾಜ್ ನೇತೃತ್ವದ ಮೂವರು ಸದಸ್ಯರನ್ನೊಳಗೊಂಡ ಸಮಿತಿ, 1972ರ ಬ್ಯಾಚ್‌ನ ಹರಿಯಾಣಾ ಮೂಲದ ಐಎಎಸ್ ಅಧಿಕಾರಿಯನ್ನು ನೂತನ ಕೇಂದ್ರ ಜಾಗೃತ ದಳದ ಆಯುಕ್ತರನ್ನಾಗಿ ಆಯ್ಕೆ ಮಾಡಿತ್ತು.

ಪ್ರದೀಪ್ ಕುಮಾರ್ ಸಿವಿಸಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದಲ್ಲಿ, ಮೂರು ವರ್ಷಗಳ ಅವಧಿಯವರೆಗೆ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಸಿವಿಸಿ ಕಾಯ್ದೆಯನ್ವಯ, ನೇಮಕಗೊಂಡ ವ್ಯಕ್ತಿ ತನ್ನ 65 ವರ್ಷ ವಯಸ್ಸಿನವರೆಗೆ ಹುದ್ದೆಯಲ್ಲಿ ಮುಂದುವರಿಯಬಹುದಾಗಿದೆ.

ಕಳೆದ 2011ರ ಮಾರ್ಚ್ 3 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಎಸ್‌.ಎಚ್.ಕಪಾಡಿಯಾ ನೇತೃತ್ವದ ಮೂವರು ನ್ಯಾಯಾಯಾಧೀಶರ ಪೀಠವು, ಕೇಂದ್ರ ಜಾಗೃತ ದಳದ ಆಯುಕ್ತರಾದ ಥಾಮಸ್ ಆಯ್ಕೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಥಾಮಸ್ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಆರೋಪ ಪಟ್ಟಿ ಸಲ್ಲಿಸಿರುವುದು ಇದಕ್ಕೆ ಕಾರಣವಾಗಿತ್ತು. ಆದರೆ, ತನಗೆ ಈ ವಿಷಯ ಗೊತ್ತೇ ಇರಲಿಲ್ಲ ಎಂದು ಕೇಂದ್ರದ ಸರಕಾರವು ಸುಪ್ರೀಂ ಕೋರ್ಟಿಗೆ ಸುಳ್ಳು ಹೇಳಿ ಛೀಮಾರಿ ಹಾಕಿಸಿಕೊಂಡಿತ್ತು.

ಕೇರಳದಲ್ಲಿ ನಡೆದ ಪಾಮೋಲೀನ್ ರಫ್ತು ವಹಿವಾಟು ಹಗರಣದಲ್ಲಿ ಥಾಮಸ್ ಭಾಗಿಯಾಗಿರುವುದನ್ನು ಗಮನಿಸಿದ ಶ್ರೇಷ್ಠ ನ್ಯಾಯಾಲಯವು, ಥಾಮಸ್ ಅವರನ್ನು ಸಿವಿಸಿ ಆಯುಕ್ತರನ್ನಾಗಿ ನೇಮಕ ಮಾಡಲು ಉನ್ನತ ಮಟ್ಟದ ಸಮಿತಿ ಶಿಫಾರಸಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಕಳಂಕಿತರಾಗಿರುವ ಥಾಮಸ್ ಅವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ಕೂಡಾ ಸಮಿತಿ ವಿಫಲವಾಗಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಇವನ್ನೂ ಓದಿ