ಬಿಹಾರ ಸರಕಾರದ ಹಲವಾರು ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎನ್‌ಡಿಎ ಮೈತ್ರಿಕೂಟವು ರಾಜ್ಯಪಾಲರ ಪಾತ್ರದ ಕುರಿತು ಮುಂಬರುವ ಸಂಸತ್ ಅಧಿವೇಶನದಲ್ಲಿ ಚರ್ಚೆ ನಡೆಸಲು ನಿರ್ಧರಿಸಿದೆ.
'ಆಗಸ್ಟ್ 1ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ರಾಜ್ಯಪಾಲರ ಕರ್ತವ್ಯದ ಕುರಿತು ಚರ್ಚಿಸುವ ನಿರ್ಣಯವೊಂದನ್ನು ಮಂಡಿಸಲು ಎನ್‌ಡಿಎ ಮುಂದಾಗಿದೆ' ಎಂದು ಬಿಹಾರ ಉಪ ಮುಖ್ಯಮಂತ್ರಿ ಎಸ್. ಕೆ. ಮೋದಿ ತಿಳಿಸಿದ್ದಾರೆ.
ಬಿಹಾರ ಮತ್ತು ಇತರೆ ರಾಜ್ಯಗಳಲ್ಲಿರುವ ಎನ್‌ಡಿಎ ಸಂಸದರು ರಾಜ್ಯಪಾಲರ ಪಾತ್ರದ ಕುರಿತು ಚರ್ಚಿಸುವ ನಿರ್ಣಯವನ್ನು ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರ ಮುಂದಿಡಲಿದ್ದು, ಅನುಮತಿ ದೊರೆತ ನಂತರ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಕೇಂದ್ರದ ಆಡಳಿತಾರೂಢ ಸರಕಾರವು ಇತರೆ ರಾಜ್ಯಗಳಲ್ಲಿರುವ ಬೇರೆ ಪಕ್ಷಗಳ ನೇತೃತ್ವದ ಸರಕಾರಕ್ಕೆ ಯಾವುದೇ ರೀತಿಯ ತೊಂದರೆ ನೀಡದಂತೆಯೂ ಸಂವಿಧಾನದ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಮೋದಿ ಹೇಳಿದ್ದಾರೆ.