ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ಸರಣಿ ಸ್ಫೋಟ; ಇಂಡಿಯನ್ ಮುಜಾಹಿದ್ದೀನ್ ಕೈವಾಡ? (Mumbai | Serial Blast | Indian Mujahuddin | Financial Capital | India)
ಮುಂಬೈ ಸರಣಿ ಸ್ಫೋಟ; ಇಂಡಿಯನ್ ಮುಜಾಹಿದ್ದೀನ್ ಕೈವಾಡ?
ಮುಂಬೈ, ಗುರುವಾರ, 14 ಜುಲೈ 2011( 10:17 IST )
ವಾಣಿಜ್ಯ ನಗರಿ ಮುಂಬೈನಲ್ಲಿ ಬುಧವಾರ ಸಂಜೆ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, 131 ಮಂದಿ ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ಭಯೋತ್ಪಾದನೆ ದಾಳಿ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ಖಚಿತಪಡಿಸಿದ್ದು, ಇಂಡಿಯನ್ ಮುಜಾಹಿದ್ದೀನ್ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.
ಆದರೆ ತ್ರಿವಳಿ ಸ್ಫೋಟ ನಡೆದು 15 ಗಂಟೆಗಳಾದರೂ ಯಾವುದೇ ಭಯೋತ್ಪಾದನೆ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. ಅಲ್ಲದೆ ಮೃತ ವ್ಯಕ್ತಿಯೊಬ್ಬರ ಮರೋಣೋತ್ತರ ಪರೀಕ್ಷೆಯ ವೇಳೆ ಶರೀರದಲ್ಲಿ ಐಇಡಿ ಸರ್ಕ್ಯೂಟ್ ಪತ್ತೆಯಾಗಿರುವುದು ಮತ್ತಷ್ಟು ಶಂಕೆಗೆ ಎಡೆ ಮಾಡಿಕೊಟ್ಟಿದೆ.
ಯಾವ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ ಎಂಬುದು ತಿಳಿದು ಬಂದಿಲ್ಲ. ಐಇಡಿ ಸರ್ಕ್ಯೂಟ್ ಪತ್ತೆಯಾದ ಹಿನ್ನಲೆಯಲ್ಲಿ ಆತ್ಮಾಹುತಿ ದಾಳಿ ಯತ್ನವನ್ನೂ ತಳ್ಳಿ ಹಾಕುವಂತಿಲ್ಲ. ಆದರೆ ಇದೊಂದು ವ್ಯವಸ್ಥಿತ ಸ್ಫೋಟ ಎಂದು ಪ್ರತ್ಯಕ್ಷ ದರ್ಶಿಗಳು ಹೇಳುತ್ತಾರೆ.
ಚಿದು ತುರ್ತು ಸಭೆ... ಈ ನಡುವ ಸರಣಿ ಸ್ಫೋಟ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ನೇತೃತ್ವದಲ್ಲಿ ತುರ್ತು ಸಭೆ ಮುಂಬೈನಲ್ಲಿ ಆರಂಭಗೊಂಡಿದೆ. ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹಾಗೂ ಉಪ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ.
ಕೇಂದ್ರ ಮೃದು ಧೋರಣೆ... ಏತನ್ಮಧ್ಯೆ ರಾಜ್ಯದ್ಯಾಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕರಾವಳಿ ತೀರ ಪ್ರದೇಶದಲ್ಲೂ ಹೈ ಎಲರ್ಟ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಖಚಿತಪಡಿಸಿದ್ದಾರೆ.
ಆದರೆ ಭಯೋತ್ಪಾದನೆ ವಿರುದ್ಧ ಕೇಂದ್ರ ಸರಕಾರದ ಮೃದು ಧೋರಣೆಯನ್ನು ಟೀಕಿಸಿರುವ ಸಿಎಂ ಮುಂಬೈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದರಂತೆ ಇಂದು (ಗುರುವಾರ) ಮಧ್ಯಾಹ್ನ ರಾಜ್ಯ ಗೃಹ ಸಚಿವರು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದೆ ಎಂದವರು ತಿಳಿಸಿದರು.
ಬುಧವಾರ ಸಂಜೆ ಮುಂಬೈನ ಜನನಿಬಿಡ ಪ್ರದೇಶವಾದ ಜವೇರಿ ಬಜಾರ್, ದಾದರ್ ಹಾಗೂ ಓಪೇರಾ ಹೌಸ್‌ನಲ್ಲಿ 6.45-7.05ರ ಗಂಟೆಯ ನಡುವೆ 20 ನಿಮಿಷಗಳಲ್ಲಿ ಮೂರು ಶಕ್ತಿಶಾಲಿ ಬಾಂಬ್ ಸ್ಫೋಟಿಸಿದ್ದವು. ಸುಧಾರಿತ ಸಾಮಾಗ್ರಿ ಬಳಸಿ ಬಾಂಬ್ ಸ್ಫೋಟ ನಡೆಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.