ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ಸ್ಫೋಟದಲ್ಲಿ ಮೃತರು 18, ವದಂತಿ ಸೃಷ್ಟಿಸ್ಬೇಡಿ: ಚಿದಂಬರಂ (Mumbai Blast | July 13, 2011 | Terror | Chidambaram | UPA)
ಕಳೆದ ಆರು ತಿಂಗಳಲ್ಲಿ ಯಾವುದೇ ಭಯೋತ್ಪಾದನಾ ಚಟುವಟಿಕೆಗಳು ನಡೆದಿಲ್ಲ ಎಂದು ಕೇಂದ್ರ ಗೃಹ ಸಚಿವರು ಎದೆ ತಟ್ಟಿಕೊಂಡು ಹೇಳಿಕೊಂಡ ಬೆನ್ನಿಗೇ ಮುಂಬೈಯಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇರಿದೆ. ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿದಂಬರಂ, ವದಂತಿ ಸೃಷ್ಟಿಸಬೇಡಿ ಎಂದು ಮಾಧ್ಯಮಗಳಿಗೆ ಕಿವಿ ಮಾತು ಹೇಳಿದರು. (ಸರಣಿ ಸ್ಫೋಟದ ದೃಶ್ಯಾವಳಿಗಳು ಇಲ್ಲಿವೆ: ಕ್ಲಿಕ್ ಮಾಡಿ )

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸತ್ತವರ ಅಧಿಕೃತ ಸಂಖ್ಯೆ 17. ಆದರೆ ನಮಗೆ ಸ್ಫೋಟ ನಡೆಸಿದ ಸ್ಥಳದಿಂದ ಈಗಷ್ಟೇ ಒಂದು ತುಂಡಾದ ತಲೆ ದೊರೆತಿದೆ. ಹೀಗಾಗಿ ಮೃತರ ಸಂಖ್ಯೆ 18 ಎನ್ನಬಹುದು ಎಂದು ಮಾಹಿತಿ ನೀಡಿದ ಚಿದು, ಯಾವುದೇ ವಿದೇಶೀಯರಿಗೆ ತೊಂದರೆಯಾಗಿಲ್ಲ. ಹೀಗಾಗಿ ಭಾರತದಲ್ಲಿ ವಿದೇಶೀಯರು ಸುರಕ್ಷಿತ ಎಂದು ಹೇಳಿದ್ದಾರೆ.

ಪ್ರತೀ ಎರಡು ಗಂಟೆಗೊಮ್ಮೆ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ ಚಿದು, ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ದಯವಿಟ್ಟು ವದಂತಿ ಪ್ರಸಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

31 ತಿಂಗಳ ಬಳಿಕದ ಸ್ಫೋಟ
ಬಳಿಯಲ್ಲೇ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಕೂಡ ಇದ್ದರು. ರಾಜ್ಯದ ಸರಕಾರವನ್ನು ಸಮರ್ಥಿಸಿಕೊಂಡ ಚಿದಂಬರಂ, 26/11 ಮುಂಬೈ ದಾಳಿ ಬಳಿಕ ರಾಜ್ಯವು ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಘಟನೆ ನಡೆದದ್ದು 31 ತಿಂಗಳ ಬಳಿಕ. ಅಂದರೆ, ಮುಂಬಯಿ ಪೊಲೀಸರು ಇದುವರೆಗೆ ಎಲ್ಲ ಭಯೋತ್ಪಾದನಾ ಬೆದರಿಕೆಗಳನ್ನೂ ಯಶಸ್ವಿಯಾಗಿ ನಿವಾರಿಸಿದ್ದಾರೆ ಎಂದರ್ಥ ಎಂದು ವಿಶ್ಲೇಷಿಸಿದರು.

ಗುಪ್ತಚರ ವೈಫಲ್ಯ ಅಲ್ಲ, ಮಾಹಿತಿ ಇರಲಿಲ್ಲ ಅಷ್ಟೇ...
26/11ರ ಬಳಿಕ ಎರಡನೇ ಭಯೋತ್ಪಾದನಾ ಪ್ರಕರಣ ಘಟಿಸಿರುವ ಬಗ್ಗೆ ದುಃಖವಿದೆ. ಎರಡೂ ಕೂಡ ಮಹಾರಾಷ್ಟ್ರದಲ್ಲೇ ನಡೆದಿವೆ. ಇದು ಭಾರತದ ಸಾರ್ವಭೌಮತೆ ವಿರೋಧಿಸುತ್ತಿರುವವರ ಕೃತ್ಯವಾಗಿದ್ದು, ಯಾರು ಮಾಡಿದ್ದಾರೆ ಎಂಬುದರ ಕುರಿತು ಸುಳಿವು ಸಿಕ್ಕಿಲ್ಲ. ಮತ್ತು ಈ ಕುರಿತಾಗಿ ಗುಪ್ತಚರ ಮಂಡಳಿಗಳಿಗೂ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸ್ಫೋಟವು ಪುನಃ ಗುಪ್ತಚರ ದಳಗಳ ವೈಫಲ್ಯವನ್ನು ಎತ್ತಿ ತೋರಿಸುತ್ತವೆಯೇ ಎಂದು ಕೇಳಿದಾಗ, ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಗುಪ್ತಚರ ಮಾಹಿತಿ ಇಲ್ಲ ಎಂದರೆ, ಅದು ಏಜೆನ್ಸಿಗಳ ವೈಫಲ್ಯ ಎಂದು ಹೇಳಲಾಗದು ಎಂದರು.

ಅಮೋನಿಯಂ ನೈಟ್ರೇಟ್ ಬಳಕೆ
ಬುಧವಾರ ಮೂರು ಕಡೆ ನಡೆಸಲಾದ ಸ್ಫೋಟದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ)ಯಲ್ಲಿ ಅಮೋನಿಯಂ ನೈಟ್ರೇಟ್ ಜತೆ ಟೈಮರ್ ಬಳಸಲಾಗಿದೆ. ರಿಮೋಟ್ ಕಂಟ್ರೋಲ್ಡ್ ಸ್ಫೋಟ ಅಲ್ಲ. ದಾದರ್‌ನಲ್ಲಿ ನಡೆದದ್ದು ಕಡಿಮೆ ತೀವ್ರತೆಯ ಸ್ಫೋಟ ಎಂದೂ ಚಿದಂಬರಂ ಮಾಹಿತಿ ನೀಡಿದರು. 18 ಮಂದಿ ಸಾವನ್ನಪ್ಪಿದ್ದು, 131 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 23 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದರು.

ತಲಾ 5 ಲಕ್ಷ ಪರಿಹಾರ
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಘೋಷಿಸಿದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ