ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 26/11ರ ಘಟನೆಯಿಂದ ಸರ್ಕಾರ ಪಾಠ ಕಲಿತಿಲ್ಲ: ಕಾಮತ್ ಕಿಡಿ (Mumbai blasts | Congress | Gurudas Kamat | Maharashtra government | blames)
26/11ರ ಘಟನೆಯಿಂದ ಸರ್ಕಾರ ಪಾಠ ಕಲಿತಿಲ್ಲ: ಕಾಮತ್ ಕಿಡಿ
ಮುಂಬೈ, ಭಾನುವಾರ, 17 ಜುಲೈ 2011( 16:57 IST )
26/11ರ ಘಟನೆಯಿಂದ ಮಹಾರಾಷ್ಟ್ರ ಸರ್ಕಾರ ಯಾವುದೇ ಪಾಠ ಕಲಿತಿಲ್ಲ ಎಂದು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಮುಖಂಡ ಗುರುದಾಸ್ ಕಾಮತ್ ಗಂಭೀರವಾಗಿ ಆರೋಪಿಸಿದ್ದಾರೆ.
ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ತಮ್ಮ ಕ್ಷೇತ್ರವಾದ ಮುಂಬೈಯ ವಾಯುವ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿ, 26/11ರ ಘಟನೆಯಿಂದ ರಾಜ್ಯ ಸರ್ಕಾರ ಇನ್ನೂ ಪಾಠ ಕಲಿಯದಿರುವುದೇ 13/7ರ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಮುಂಬೈಯ ವಿವಿಧ ಭಾಗಗಳಲ್ಲಿ 5000 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಕಳೆದ ವಾರ ನಡೆದ ಓಪೆರಾ ಹೌಸ್, ಝವೇರಿ ಬಜಾರ್ ಮತ್ತು ದಾದರ್ ಪ್ರದೇಶಗಳಲ್ಲಿ ಇನ್ನೂ ಕ್ಯಾಮರಾ ಅಳವಡಿಸುವ ಕಾರ್ಯ ನಡೆದಿಲ್ಲ ಎಂದು ಆರೋಪಿಸಿದರು.
2008ರ ಉಗ್ರರ ದಾಳಿಯ ನಂತರ ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕಾಗಿತ್ತು. ಆದರೆ ಆ ದಾಳಿಯಿಂದ ಯಾವುದೇ ಪಾಠ ಕಲಿತಿಲ್ಲ. ಮುಂಜಾಗ್ರತಾ ಹಾಗೂ ಅಗತ್ಯ ಕ್ರಮಗಳನ್ನೂ ಸರ್ಕಾರ ಕೈಗೊಂಡಿಲ್ಲ ಎಂದರು. ಕರಾವಳಿ ಪೊಲೀಸ್ ಠಾಣೆಗಳ ಸ್ಥಾಪನೆ ಹಾಗೂ ಬೋಟ್‌ಗಳನ್ನು ಗಸ್ತು ತಿರುಗಿಸಲು ನಿಯೋಜಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಕಾಮತ್ ದೂರಿದರು.