ತೀರಾ ದುರ್ಬಲ ಲೋಕಪಾಲ ಮಸೂದೆಯ ಕರಡು ರೂಪಿಸಿದ ಸರಕಾರದ ವಿರುದ್ಧ ಸಮರ ಸಾರಿ ಆಗಸ್ಟ್ 16ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟಿನಿಂದ ರಕ್ಷಣೆಯ ಮೊರೆ ಹೋದ ಬಳಿಕ ಇದೀಗ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ 'ಮಂತ್ರಿಗಳು ಸಿದ್ಧಪಡಿಸಿದ ಲೋಕಪಾಲ ಮಸೂದೆಯ ಕರಡನ್ನು 'ಈ ದೇಶದ ಮೇಲೆ ಮಾಡಿದ ಜೋಕ್' ಎಂದು ಪ್ರಧಾನಿಗೆ ದೂರು ನೀಡಿದ್ದಾರೆ.
ಲೋಕಪಾಲ ಮಸೂದೆಯು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ತಡೆಯುವ ಉದ್ದೇಶವನ್ನು ಹೊಂದಿದೆ. ಸಮಾನ ಮತ್ತು ಸರ್ವಸಮ್ಮತ ಕರಡು ರೂಪಿಸುವ ನಿಟ್ಟಿನಲ್ಲಿ ತಿಂಗಳಗಟ್ಟಲೆ ಹೆಣಗಾಡಿದ ಬಳಿಕ ಸರಕಾರದ ಪ್ರತಿನಿಧಿಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳಲ್ಲಿ ಒಮ್ಮತ ಮೂಡಲು ವಿಫಲವಾಗಿ, ಎರಡೂ ತಂಡವು ತಲಾ ಒಂದೊಂದು ಕರಡು ಮಸೂದೆಯನ್ನು ರೂಪಿಸಿದ್ದವು. ಅದೀಗ ಸಂಪುಟದ ಮುಂದಿಟ್ಟ ಬಳಿಕ, ಸಂಪುಟವು ಲೋಕಸಭೆಯಲ್ಲಿ ತನ್ನದೇ ಆದ ಕರಡನ್ನು ಮಂಡಿಸಿ ಶಾಸನ ರೂಪ ನೀಡಲು ಯೋಜಿಸಿದೆ.
ಆಗಸ್ಟ್ 16ರಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನಾನು ಈಗಾಗಲೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ. ಪ್ರತಿಭಟನೆ ನಡೆಸುವುದು ನಮ್ಮ ಸಾಂವಿಧಾನಿಕ ಹಕ್ಕು. ಹೀಗಾಗಿ, ಬಾಬಾ ರಾಮದೇವ್‌ಗೆ ಮಾಡಿದಂತೆಯೇ ಪ್ರತಿಭಟನೆ ಹತ್ತಿಕ್ಕುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹಜಾರೆ ಹೇಳಿದರು.
ನಾವು ಬಂಧನಕ್ಕೊಳಗಾಗಲು, ಪೊಲೀಸರಿಂದ ಲಾಠಿ ಚಾರ್ಜ್‌ಗೆ ಈಡಾಗಲು ನಾವು ಸಿದ್ಧರಿದ್ದೇವೆ. ಆದರೆ ಈ ಭ್ರಷ್ಟಾಚಾರದ ಬಗ್ಗೆ ತಾಳ್ಮೆ ವಹಿಸಿದ್ದು ಸಾಕಾಗಿ ಹೋಗಿದೆ. ನಾವು ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಇದನ್ನೇ ನಾನು ಪ್ರಧಾನಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಹಜಾರೆ ಹೇಳಿದ್ದಾರೆ.
ಇದೇ ವೇಳೆ, ತಮ್ಮ ಪ್ರತಿಭಟನಾ ಕಾರ್ಯಕ್ರಮದ ಕುರಿತಾಗಿ ಈಗಾಗಲೇ ದೆಹಲಿ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದು ಅಣ್ಣಾ ಹಜಾರೆ ತಂಡದ ಪ್ರಶಾಂತ್ ಭೂಷಣ್ ಕೂಡ ತಿಳಿಸಿದರು.