ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿ ಸ್ಫೋಟ: ಬಿಜೆಪಿ ವಿರುದ್ಧ ಒಂದಾದ ಕಾಂಗ್ರೆಸ್, ಎಡರಂಗ (Lokayukta Report | Illegal Mining | Congress | BJP | Yeddyurappa)
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಪುಟದ ನಾಲ್ವರು ಸಚಿವರನ್ನು ತಪ್ಪಿತಸ್ಥರು ಎಂದು ಸಾರಿರುವ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರದ ವಿರುದ್ಧ ತನ್ನ ವಾಗ್ದಾಳಿ ತೀಕ್ಷ್ಣಗೊಳಿಸಿರುವ ಕಾಂಗ್ರೆಸ್, ತಕ್ಷಣವೇ ಯಡಿಯೂರಪ್ಪ ಮತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಈ ಕುರಿತು ಇನ್ನಾದರೂ ಸಿಬಿಐ ತನಿಖೆಗೆ ರಾಜ್ಯ ಸರಕಾರವು ಒಪ್ಪಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಆದರೆ ತಾವು ಹೇಳಿದ್ದನ್ನು ಎಂದಿಗೂ ಮಾಡಿ ತೋರಿಸದ ಮನಸ್ಥಿತಿಯಲ್ಲಿರುವವರು ತಮ್ಮ ಬೇಡಿಕೆಗೆ ಮಣಿಯುತ್ತಾರೆಂಬ ಭರವಸೆ ನಮಗಿಲ್ಲ ಎಂದೂ ಹೇಳಿದರು.

ಯಡಿಯೂರಪ್ಪ ಇನ್ನಿಂಗ್ಸ್ ಅಂತ್ಯವಾಗಲಿ...
ಇದೇ ವೇಳೆ, ಕೇಂದ್ರ ವಾರ್ತಾ ಸಚಿವೆ ಅಂಬಿಕಾ ಸೋನಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರದ ಎಲ್ಲ ಆರೋಪಗಳನ್ನು ಸಮರ್ಥಿಸಿಕೊಳ್ಳುತ್ತಲೇ ಯಡಿಯೂರಪ್ಪ ಅವರು ಸುದೀರ್ಘ ಇನ್ನಿಂಗ್ಸ್ ಆಡಿದ್ದಾರೆ. ಈಗ ಲೋಕಾಯುಕ್ತ ವರದಿಯು ಅತ್ಯಂತ ಪ್ರಬಲ ಆರೋಪವನ್ನು ಮಾಡಿದೆ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಇರಬೇಕು ಮತ್ತು ಹೊಣೆಗಾರಿಕೆ ಇರಬೇಕು ಎಂಬುದು ಎಲ್ಲರಿಗೂ ಬಯಕೆ. ಇಷ್ಟೆಲ್ಲಾ ಆದ ಬಳಿಕವೂ ತಲೆ ಎತ್ತಿ ನಡೆಯುವುದು ಹೇಗೆ ಎಂಬುದನ್ನು ಮುಖ್ಯಮಂತ್ರಿ ಯೋಚಿಸಬೇಕು ಎಂದು ಹೇಳಿದರು.

ಎಡಪಕ್ಷಗಳೂ ಕೆರಳಿ ಕೆಂಡ....
ಈ ಕುರಿತು ಪ್ರತಿಕ್ರಿಯಿಸಿರುವ ಎಡಪಕ್ಷಗಳು, ಬಿಜೆಪಿ ನಾಯಕರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ. ಇದೊಂದು ಅತ್ಯಂತ ಗಂಭೀರ ವಿಷಯವಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ರಾಜ್ಯಸಭಾ ಸದಸ್ಯ, ಸಿಪಿಐಂ ಪೊಲಿಟ್ ಬ್ಯುರೋ ಸದಸ್ಯ ಸೀತಾರಾಮ ಯೆಚೂರಿ ಸುದ್ದಿಗಾರರಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಎಚ್ಚೆತ್ತುಕೊಳ್ಳಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಭ್ರಷ್ಟಾಚಾರದ ವಿರುದ್ಧದ ಬಿಜೆಪಿಯ ಹೋರಾಟವೇ ಅರ್ಥಹೀನವಾಗಿಬಿಡುತ್ತದೆ ಎಂದು ಯೆಚೂರಿ ಹೇಳಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಾಯುಕ್ತ ವರದಿ, ಅಕ್ರಮ ಗಣಿಗಾರಿಕೆ, ಕರ್ನಾಟಕ, ಕಾಂಗ್ರೆಸ್, ಬಿಜೆಪಿ, ಯಡಿಯೂರಪ್ಪ, ಎಡರಂಗ, ಕರ್ನಾಟಕ, ಗಣಿ, ಬಳ್ಳಾರಿ