ನಮ್ಮ ಲೋಕಪಾಲ ಮಸೂದೆ ರೆಡಿ, ಸಂಸತ್ತಿನಲ್ಲಿ ಮಂಡಿಸ್ತೀವಿ: ಕೇಂದ್ರ
ನವದೆಹಲಿ, ಶುಕ್ರವಾರ, 22 ಜುಲೈ 2011( 18:08 IST )
ಭಾರೀ ವಿವಾದ ಸೃಷ್ಟಿಸಿದ್ದ ಭ್ರಷ್ಟಾಚಾರ-ನಿಗ್ರಹದ ಉದ್ದೇಶವಿರುವ ಲೋಕಪಾಲ ಮಸೂದೆಯ ಕರಡು ಸಿದ್ಧವಾಗಿದೆ ಎಂದು ಘೋಷಿಸಿರುವ ಕೇಂದ್ರವು, ಆಗಸ್ಟ್ 1ರಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುತ್ತದೆ ಎಂದು ಶುಕ್ರವಾರ ಹೇಳಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಂಸದೀಯ ವ್ಯವಹಾರ ಖಾತೆಯ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ, ಲೋಕಪಾಲ ಮಸೂದೆ ಸಿದ್ಧವಿದೆ. ಅದನ್ನು ಮುಂದಿನ ವಾರ ಸಂಸತ್ತಿನ ಮುಂದಿಡಲಾಗುತ್ತದೆ ಎಂದು ತಿಳಿಸಿದರು.
ಸಂಸತ್ತಿನಲ್ಲಿ ಮಂಡಿಸಿದ ಬಳಿಕ ಅದನ್ನು ಸ್ಥಾಯಿ ಸಮಿತಿಯ ಕೈಗೊಪ್ಪಿಸಲಾಗುತ್ತದೆ. ಸ್ಥಾಯಿ ಸಮಿತಿ ವರದಿ ಪಡೆದ ಬಳಿಕ, ಎಲ್ಲ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಈ ಮಸೂದೆಯು ಅಂಗೀಕಾರಗೊಂಡು ಕಾಯ್ದೆರೂಪ ಪಡೆಯುವ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಸಚಿವರು ಹೇಳಿದರು.
ಲೋಕಪಾಲ ಮಸೂದೆ ರೂಪಿಸಲು ರಚಿಸಲಾಗಿದ್ದ ಜಂಟಿ ಕರಡು ಸಮಿತಿಯ ಸರಕಾರಿ ಪ್ರತಿನಿಧಿಗಳು ಮತ್ತು ನಾಗರಿಕ ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯವೇರ್ಪಟ್ಟು, ಎರಡೂ ಬಣಗಳು ಪ್ರತ್ಯೇಕವಾಗಿಯೇ ಮಸೂದೆ ಸಿದ್ಧಪಡಿಸಿದ್ದವು. ಅವುಗಳನ್ನು ಪರಿಗಣಿಸಿರುವ ಸರಕಾರ, ಈಗ ಎರಡರಿಂದ ಕೆಲವು ಅಂಶಗಳನ್ನು ಕಳೆದು ಕೂಡಿಸಿ, ತನ್ನದೇ ಆದ ಮಸೂದೆಯನ್ನು ಸಿದ್ಧಪಡಿಸಿದೆ. ಆದರೆ ಸರಕಾರ ಸಿದ್ಧಪಡಿಸುವ ಮಸೂದೆಯು ಭ್ರಷ್ಟರನ್ನು ಶಿಕ್ಷಿಸುವ ಬದಲು, ದೂರು ನೀಡಿದವರನ್ನೇ ಜೈಲಿಗೆ ಕಳುಹಿಸುವ ಉದ್ದೇಶ ಹೊಂದಿದೆ ಎಂದು ಆಪಾದಿಸಿದ್ದ ನಾಗರಿಕ ಸಮಿತಿ ಸದಸ್ಯ ಅಣ್ಣಾ ಹಜಾರೆ, ಆಗಸ್ಟ್ 16ರಿಂದ ಎರಡನೇ ಸ್ವಾತಂತ್ರ್ಯ ಹೋರಾಟದ ಪ್ರಯುಕ್ತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಇದೇ ವೇಳೆ ಹಾಜರಿದ್ದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ, ಲೋಕಪಾಲ ಕರಡು ಜಂಟಿ ಸಮಿತಿಯ ವಿವಾದಾತ್ಮಕ ಸಚಿವ ಕಪಿಲ್ ಸಿಬಲ್, ಭ್ರಷ್ಟಾಚಾರ ಮಟ್ಟ ಹಾಕಲು ಇಡೀ ದೇಶ ಹಾಗೂ ನಮ್ಮ ಸರಕಾರ ಇದಿರು ನೋಡುತ್ತಿದೆ ಎಂದು ಸೇರಿಸಿದರು.
ಸಂಸದೀಯ ಸಮಿತಿಗೆ ಹೋಗಿ ಲೋಕಪಾಲ ಮಸೂದೆಯು ಅಂಗೀಕಾರವಾದ ತಕ್ಷಣ, ನಾವೆಲ್ಲರೂ ಒಟ್ಟಾಗಿ ಭ್ರಷ್ಟಾಚಾರವನ್ನು ಎದುರಿಸುತ್ತೇವೆ ಮತ್ತು ಅದನ್ನು ಕೊನೆಗೊಳಿಸುತ್ತೇವೆ ಎಂದು ಸಾರಾಸಗಟಾಗಿ ಹೇಳಿಬಿಟ್ಟರು.