ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಒಂದು ಸರ್ಕಸ್ ಇದ್ದಂತೆ: ಮಣಿ ಶಂಕರ್ ಅಯ್ಯರ್ (Congress | 24 Akbar Road | Sonia Gandhi | Mani Shankar Ayyar)
ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಬೆಳಕಿಗೆ ಬಂದಿದೆ. ಹಲವಾರು ವರ್ಷಗಳ ಬಳಿಕ ಭಿನ್ನಮತದ ಧ್ವನಿಯೊಂದು ಕೇಳಿಬಂದಿದ್ದು, ಕಾಂಗ್ರೆಸ್ ಪಕ್ಷವು ಒಂದು 'ಸರ್ಕಸ್' ಎಂದು ಬಣ್ಣಿಸಿರುವ ಹಿರಿಯ ಕಾಂಗ್ರೆಸಿಗ ಮಣಿ ಶಂಕರ್ ಅಯ್ಯರ್, ಪ್ರತಿಯೊಬ್ಬ ಕಾಂಗ್ರೆಸಿಗನೂ ಈ ಸರ್ಕಸ್ ಜೊತೆ ಸಂಪರ್ಕ ಹೊಂದಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಾರೆ.

ರಶೀದ್ ಕಿದ್ವಾಯಿ ಅವರು ಬರೆದಿರುವ "24, ಅಕ್ಬರ್ ರೋಡ್" (ಕಾಂಗ್ರೆಸ್ ಕಚೇರಿಯಿರುವ ರಸ್ತೆ) ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ಅವರು, "10 ಜನಪಥ್" (ಸೋನಿಯಾ ಗಾಂಧಿ ನಿವಾಸ) ಮತ್ತು ಅಹಮದ್ ಪಟೇಲ್ (ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ) ಮನೆಯು ಎಐಸಿಸಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ವ್ಯಂಗ್ಯವಾಗಿ ನುಡಿದರು.

ಪಕ್ಷದಲ್ಲಿರುವ ಪ್ರಭಾವಶಾಲಿಗಳು ಸೋನಿಯಾ ಗಾಂಧಿ ನಿವಾಸವಿರುವ 10, ಜನಪಥ್‌ಗೆ ಅಥವಾ ಆಕೆಯ ರಾಜಕೀ ಕಾರ್ಯದರ್ಶಿ ಅಹ್ಮದ್ ಪಟೇಲ್ ಇರುವ 23, ವಿಲ್ಲಿಂಗ್ಡನ್ ಕ್ರೆಸೆಂಟ್‌ಗೆ ನೇರ ಪ್ರವೇಶಾವಕಾಶ ಹೊಂದಿದ್ದರೆ, "ಹತಾಶ ಕಾರ್ಯಕರ್ತರು" ಮಾತ್ರವೇ 24 ಅಕ್ಬರ್ ರಸ್ತೆಗೆ ಹೋಗುತ್ತಾರೆ ಎಂದು ಮಣಿ ಶಂಕರ್ ಅಯ್ಯರ್ ಹೇಳಿದರು.

ಬಾಬರಿ ಮಸೀದಿ ನಾಶಕ್ಕೆ ಪಿವಿಎನ್ ಕಾರಣ
ನಂತರ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರತ್ತ ತಿರುಗಿದ ಅಯ್ಯರ್, 1992ರ ಬಾಬರಿ ಮಸೀದಿ ಧ್ವಂಸವು ರಾವ್ ಅಧಿಕಾರಾವಧಿಯಲ್ಲಿ ನಡೆದಿದ್ದರಿಂದ ಅದಕ್ಕೆ ಅವರೇ ಕಾರಣ ಎಂದರು.

ಜಾತ್ಯತೀತತೆಯ ಕುರಿತು ದಿವಂಗತ ರಾವ್ ಅವರಿಗೆ ಕಾಂಗ್ರೆಸ್ ಜತೆ ಸಂಘರ್ಷವಿತ್ತು ಎಂದ ಅಯ್ಯರ್, ತಮ್ಮ ರಾಮ್-ರಹೀಂ ಯಾತ್ರೆಯ ಸಂದರ್ಭದಲ್ಲಿ ರಾವ್ ಈ ಬಗ್ಗೆ ನನ್ನಲ್ಲಿ ಪ್ರಸ್ತಾಪಿಸಿದ್ದರು. ಭಾರತವು ಹಿಂದೂ ದೇಶ ಎಂದು ಮಾಜಿ ಪ್ರಧಾನಿ ನಂಬಿದ್ದರು. ಹೀಗಾಗಿ ಜಾತ್ಯತೀತತೆ ಎಂದರೇನೆಂಬುದು ತನಗೆ ಅರ್ಥವಾಗಿಲ್ಲವೆಂದಿದ್ದರು ಎಂದೂ ಅಯ್ಯರ್ ವಿವರಿಸಿದರು.

ಇದೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಸಿಎನ್ಎನ್-ಐಬಿಎನ್ ಚಾನೆಲ್ ಸಂಪಾದಕ ರಾಜದೀಪ್ ಸರ್ದೇಸಾಯಿ ಅವರೊಂದಿಗೆ ಚರ್ಚೆಯೂ ನಡೆಯಿತು.

ಇಪ್ಪತ್ತು ವರ್ಷಗಳ ಹಿಂದೆ ಇದೇ ದಿನ ರಾವ್ ಸರಕಾರದಲ್ಲಿ ಮನಮೋಹನ್ ಸಿಂಗ್ ಅವರು ಆರ್ಥಿಕ ಸುಧಾರಣೆಗಳನ್ನು ಆರಂಭಿಸಿದ್ದರು. ರಾವ್ ಅವರಿಗೆ ಒಂದೇ ಒಂದು ಸಮಾಧಿಯೂ ಇಲ್ಲ. ಅವರಿಲ್ಲದೆ ಮನಮೋಹನ್ ಸಿಂಗ್ ವಿತ್ತೀಯ ಸುಧಾರಣೆಗಳತ್ತ ಗಮನವನ್ನೇ ಹರಿಸುತ್ತಿರಲಿಲ್ಲ ಎಂದು ರಾಜದೀಪ್ ಹೇಳಿದರು.

ಮನೆತನದ ಪಕ್ಷವಾಗಿದೆ ಕಾಂಗ್ರೆಸ್
ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೀತಾರಾಮ ಕೇಸರಿ ವಿಷಯದಲ್ಲಿ ಕೂಡ ಅದೊಂದು ರಕ್ತರಹಿತ ಕ್ರಾಂತಿಯಾಗಿತ್ತು. ಅದು ಕಾಂಗ್ರೆಸ್‌ನ ಇಬ್ಬಂದಿತನವನ್ನು ತೋರಿಸುತ್ತದೆ. ಪಕ್ಷವು ಒಂದು ಕುಟುಂಬದ ಮೇಲೆಯೇ ಅವಲಂಬಿಸಿರುವುದು ಅದರ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಕಾಂಗ್ರೆಸ್ ಒಂದು ಕಾಲದಲ್ಲಿ ಪ್ರಜಾಸತ್ತಾತ್ಮಕವಾಗಿ ಹೋರಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿತು. ಆದರೆ ಇಂದು ಅದು ಮನೆತನದ ಪಕ್ಷವಾಗಿಬಿಟ್ಟಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್, ನಿಜಕ್ಕೂ ಆರ್ಥಿಕ ಸುಧಾರಣೆಗಳು ಆರಂಭವಾಗಿದ್ದು ರಾಜೀವ್ ಗಾಂಧಿ ಕಾಲದಲ್ಲಿ. ರಾವ್ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದಿತು ಎಂದರಲ್ಲದೆ, ರಾವ್ ಕುಟುಂಬದ ಆಗ್ರಹದ ಮೇರೆಗೇ ಅವರನ್ನು ಹೈದರಾಬಾದಿನಲ್ಲಿ ಸಮಾಧಿ ಮಾಡಲಾಯಿತು. ಕಾಂಗ್ರೆಸ್‌ಗೆ ದೆಹಲಿಯಲ್ಲಿ ಇಷ್ಟವಿರಲಿಲ್ಲ ಎಂಬ ಕಾರಣಕ್ಕಾಗಿ ಅಲ್ಲ ಎಂದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕಾಂಗ್ರೆಸ್, 24 ಅಕ್ಬರ್ ರೋಡ್, ಸೋನಿಯಾ ಗಾಂಧಿ, ಎಐಸಿಸಿ, ಮಣಿ ಶಂಕರ್ ಅಯ್ಯರ್, ಅಹ್ಮದ್ ಪಟೇಲ್