2ಜಿ: ರಾಜಾ ಯು-ಟರ್ನ್, ಪ್ರಧಾನಿ, ಚಿದು ವಿರುದ್ಧ ಹೇಳಿಕೆ ನೀಡಿಲ್ಲ
ನವದೆಹಲಿ, ಮಂಗಳವಾರ, 26 ಜುಲೈ 2011( 12:27 IST )
PTI
2ಜಿ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಇದೀಗ ಯು-ಟರ್ನ್ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಅಂದಿನ ವಿತ್ತಸಚಿವ ಪಿ.ಚಿದಂಬರಂ ವಿರುದ್ಧ ದೋಷಾರೋಪ ಸಲ್ಲಿಸುವಂತೆ ಕೋರಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ.
ಪ್ರಧಾನಮಂತ್ರಿ ಮತ್ತು ಅಂದಿನ ವಿತ್ತಸಚಿವ ಚಿದಂಬರಂ ಅವರನ್ನು 2ಜಿ ಹಗರಣದಲ್ಲಿ ದೋಷಾರೋಪ ಸಲ್ಲಿಸುವಂತೆ ಕೋರಿಲ್ಲ ಎಂದು ರಾಜಾ ಪರ ಹಿರಿಯ ವಕೀಲ ಸುಶೀಲ್ ಕುಮಾರ್, ಸಿಬಿಐ ನ್ಯಾಯಾಧೀಶ ಒಪಿ ಸೈಯಾನಿಯವರಿಗೆ ಸ್ಪಷ್ಟಪಡಿಸಿದ್ದಾರೆ.
2ಜಿ ಹಗರಣದ ತನಿಖೆ ನಡೆಯುತ್ತಿರುವುದರಿಂದ ಆರೋಪ ಪಟ್ಟಿಗೆ ಯಾವುದೇ ಮಾನ್ಯತೆಯಿಲ್ಲ. ಇತರ ನ್ಯಾಯಾಲಯಗಳ ಒತ್ತಡದಿಂದಾಗಿ ನನಗೆ ಜಾಮೀನು ದೊರೆಯುತ್ತಿಲ್ಲ. 2ಜಿ ಹಗರಣದ ವಿಚಾರಣೆ ನ್ಯಾಯಸಮ್ಮತವಲ್ಲ ಎಂದು ಆರೋಪಿ ರಾಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂದಿನ ವಿತ್ತಖಾತೆ ಸಚಿವ ಪಿ.ಚಿದಂಬರಂ, ಟೆಲಿಕಾಂ ಶೇರುಗಳ ಮಾರಾಟಕ್ಕೆ ಸಾಕ್ಷಿಯಾಗಿರುವುದರಿಂದ ನ್ಯಾಯಾಲಯದಲ್ಲಿ ಹೇಳಿಕೆ ನೀಡಬೇಕು ಎಂದು ಕೋರಿದರು.
ಪ್ರಧಾನ ಮಂತ್ರಿ ಮತ್ತು ಅಂದಿನ ವಿತ್ತಸಚಿವ ಪಿ.ಚಿದಂಬರಂ ವಿರುದ್ಧ ನಾನು ದೋಷಾರೋಪಣೆ ಮಾಡಿಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಠಿ. ಸತ್ಯ ವರದಿಯನ್ನು ಬಹಿರಂಗಪಡಿಸಿ, ಇಲ್ಲವಾದಲ್ಲಿ ಕೋರ್ಟ್ ಆವರಣದಿಂದ ಹೊರಹೋಗಿ ಎಂದು ಡಿಎಂಕೆ ನಾಯಕ ಎ.ರಾಜಾ ಗುಡುಗಿದರು.
ನಾನು ಯಾರ ವಿರುದ್ಧವೂ ಆರೋಪ ಮಾಡುತ್ತಿಲ್ಲ. ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುತ್ತಿದ್ದೇನೆ. ಮಾಧ್ಯಮಗಳು ತಿರುಚುವುದನ್ನು ತಪ್ಪಿಸಲು, ಅಮೆರಿಕದ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿರುವುದನ್ನು ದೇಶಾದ್ಯಂತ ಟೆಲಿವಿಜನ್ ಮೂಲಕ ಬಿತ್ತರಿಸಲಾಗುತ್ತದೆ ಎಂದರು.
ಎನ್‌ಡಿಎ ಸರಕಾರ ರೂಪಿಸಿದ ಟೆಲಿಕಾಂ ನಿಯಮಗಳನ್ನು ನಾನು ಮುಂದುವರಿಸಿದ್ದರಿಂದ, 2ಜಿ ತರಂಗ ಗುಚ್ಚ ಹರಾಜು ಮಾಡದಿರುವ ನಿರ್ಧಾರ ತೆಗೆದುಕೊಂಡಿದ್ದೇನೆ. ಇದರಲ್ಲಿ ನಾನು ಯಾವುದೇ ತಪ್ಪೆಸಗಿಲ್ಲ. 2ಜಿ ಹಗರಣದ ಭ್ರಷ್ಟಾಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ರಾಜಾ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದ್ದಾರೆ.