ನವದೆಹಲಿ: ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿರುವ ದುರ್ಬಲ ಲೋಕಪಾಲ ಮಸೂದೆಯನ್ನು ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆ ತಂಡ ತಿರಸ್ಕರಿಸಿದೆ.
ದುರ್ಬಲ ಲೋಕಪಾಲ ಮಸೂದೆ ಒಂದು ದೊಡ್ಡ ಜೋಕ್,ಜನಸಾಮಾನ್ಯರಿಗೆ ವಂಚಿಸುವ ತಂತ್ರವಾಗಿದೆ.ಲೋಕಪಾಲ ಮಸೂದೆಯನ್ನು ಕೈಬಿಟ್ಟು ಪ್ರಬಲ ಲೋಕಪಾಲ ಮಸೂದೆ ಮಂಡಿಸುವಂತೆ ಒತ್ತಾಯಿಸಿ ಅಣ್ಣಾ ಹಜಾರೆ ಆಗಸ್ಟ್ 16 ರಂದು ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರ ದುರ್ಬಲ ಮಸೂದೆಯನ್ನು ಜಾರಿಗೆ ತಂದು ಜನಸಾಮಾನ್ಯರನ್ನು ವಂಚಿಸಲು ಹೊರಟಿದೆ.ಒಂದು ವೇಳೆ ಪ್ರಧಾನಿಯನ್ನು ಮತ್ತು ನ್ಯಾಯಾಂಗವನ್ನು ಲೋಕಪಾಲ ಮಸೂದೆಗೆ ಸೇರ್ಪಡೆಗೊಳಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಆಗಸ್ಟ್ 16 ರಂದು ಮತ್ತೆ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ. ನನ್ನ ಜೊತೆಗೆ ಇಡೀ ದೇಶ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದೆ. ಇದು ಕೇವಲ ಪ್ರತಿಭಟನೆಯಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಹೇಳಿದ್ದಾರೆ.
ನಾಗರಿಕ ಸಮಿತಿ ಸದಸ್ಯ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಸಂಪುಟ ನೀಡಿರುವ ಲೋಕಪಾಲ ಮಸೂದೆಯನ್ನು ಕೈಬಿಡುವಂತೆ ಒತ್ತಾಯಿಸಿ ಅಣ್ಣಾ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಸಶಕ್ತ ಮಸೂದೆಯನ್ನು ಜಾರಿಗೆ ತರಬೇಕು ಎನ್ನುವುದೇ ನಾಗರಿಕ ಸಮಿತಿಯ ಮೂಲ ಉದ್ದೇಶ ಎಂದು ಸ್ಪಷ್ಟಡಿಸಿದ್ದಾರೆ.
ದೆಹಲಿ ಪೊಲೀಸರ ನಿರಾಕರಣೆ
ಇದೀಗ, ಅಣ್ಣಾ ಹಜಾರೆ ಜಂತರ್ ಮಂತರ್‌ನಲ್ಲಿ ಆಗಸ್ಟ್ 16 ರಂದು ನಡೆಸಲು ಉದ್ದೇಶಿಸಿರುವ ಅಮರಣಾಂತ ನಿರಶನಕ್ಕೆ ಅನುಮತಿ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.
ಯೋಗ ಗುರು ಬಾಬಾ ರಾಮದೇವ್, ಕಪ್ಪು ಹಣದ ವಿವರಗಳನ್ನು ಬಹಿರಂಗಪಡಿಸಿ ಎಂದು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ, ದೆಹಲಿ ಪೊಲೀಸರು ಮಧ್ಯರಾತ್ರಿಯಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ಮಹಿಳೆಯರು ಮಕ್ಕಳು ಎನ್ನದೆ ಲಾಠಿಚಾರ್ಜ್ ನಡೆಸಿ ದೌರ್ಜನ್ಯವೆಸಗಿ, ಸಾಕ್ಷಿಗಳು ದೊರೆಯದಂತೆ ಸಿಸಿಟಿವಿಗಳನ್ನು ಕೂಡಾ ಹಾಳುಗೆಡುವಿದ್ದರು.
ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅನುಮತಿ ದೊರೆಯುವುದಿಲ್ಲ. ಆದರೆ, ಕೇಂದ್ರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಉಪವಾಸ ಸತ್ಯಾಗ್ರಹಕ್ಕೆ ಕೂಡಾ ಅಡ್ಡಿಪಡಿಸಿ ಸರ್ವಾಧಿಕಾರದ ಧೋರಣೆ ತಳೆದಿದೆ ಎನ್ನುವುದು ಹಜಾರೆ ಬೆಂಬಲಿಗರ ಅಕ್ರೋಶವಾಗಿದೆ.
ದೆಹಲಿ ಪೊಲೀಸರು ಅನುಮತಿ ನೀಡಲಿ, ಬಿಡಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿಯೇ ತೀರುವುದಾಗಿ ಅಣ್ಣಾ ಹಜಾರೆ ಘೋಷಿಸಿದ್ದಾರೆ. ದೇಶಾದ್ಯಂತ ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲದ ಮಹಾಪೂರ ಹರಿದು ಬರುತ್ತಿದೆ ಎಂದು ಹೇಳಿದ್ದಾರೆ.