ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆ ನಿರಶನಕ್ಕೆ ಅನುಮತಿ ನೀಡಲ್ಲ: ದೆಹಲಿ ಪೊಲೀಸ್ (Delhi Police | Anna Hazare | FastTeam | Anna denied permission to hold fast)
ಹಜಾರೆ ನಿರಶನಕ್ಕೆ ಅನುಮತಿ ನೀಡಲ್ಲ: ದೆಹಲಿ ಪೊಲೀಸ್
ನವದೆಹಲಿ, ಶುಕ್ರವಾರ, 29 ಜುಲೈ 2011( 15:46 IST )
PTI
ಜಂತರ್ ಮಂತರ್‌ನಲ್ಲಿ ಅಗಸ್ಟ್ 16 ರಿಂದ ನಿರಶನ ಸತ್ಯಾಗ್ರಹ ಆರಂಭಿಸುವ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆಯವರ ಮನವಿಯನ್ನು ದೆಹಲಿ ಪೊಲೀಸ್ ತಿರಸ್ಕರಿಸಿದೆ.
ಹಜಾರೆಯವರಿಗೆ ಪತ್ರ ಬರೆದ ದೆಹಲಿ ಪೊಲೀಸರು, ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ, ಜಂತರ್ ಮಂತರ್‌ನಲ್ಲಿ ನಿರಶನ ಆರಂಭವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸುವುದರಿಂದ ಯಾವುದೇ ಸತ್ಯಾಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಾಹಿತಿ ನೀಡಿದೆ.
ಒಂದು ವೇಳೆ ಅಣ್ಣಾ ಹಜಾರೆ ಅಮರಣಾಂತ ನಿರಶನ ಮುಂದುವರಿಸಲು ಬಯಸಿದಲ್ಲಿ, ದೆಹಲಿ ಹೊರವಲಯದಲ್ಲಿ ಮುಷ್ಕರದ ನಿಗದಿತ ಅವಧಿ ನೀಡಿ ಉಪವಾಸ ಸತ್ಯಾಗ್ರಹ ಮುಂದುವರಿಸಬಹುದು ಎಂದು ದೆಹಲಿ ಪೊಲೀಸರು ಪತ್ರದಲ್ಲಿ ತಿಳಿಸಿದ್ದಾರೆ.
ದುರ್ಬಲ ಲೋಕಪಾಲ ಮಸೂದೆಯನ್ನು ಸರಕಾರದ ಸಚಿವ ಸಂಪುಟ ಸಮಿತಿ ಅಂಗೀಕರಿಸಿರುವುದನ್ನು ವಿರೋಧಿಸಿ, ಮುಂದಿನ ಆಗಸ್ಟ್ 16 ರಂದು ಜಂತರ್ ಮಂತರ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿಕೆ ನೀಡಿದ್ದರು.
ಜಂತರ್ ಮಂತರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಕೇವಲ ಹಜಾರೆ ಪ್ರತಿಭಟನೆಯಲ್ಲ. ಸಂಪೂರ್ಣ ಭರತ ದೇಶ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಎರಡನೇ ಬಾರಿಗೆ ನಡೆಸುತ್ತಿರುವ ಹೋರಾಟ ಎಂದು ಪರಿಗಣಿಸಿ ಜನತೆ ಬೀದಿಗೆ ಬಂದು ಹೋರಾಟ ನಡೆಸಬೇಕು ಎಂದು ಹಜಾರೆ ಕರೆ ನೀಡಿದ್ದಾರೆ.
ಅಣ್ಣಾ ಹಜಾರೆ ತಂಡದ ನಾಗರಿಕ ಸಮಿತಿಯ ಶಿಫಾರಸುಗಳನ್ನು ಕೈಬಿಟ್ಟು, ಸರಕಾರದ ಪರ ಸದಸ್ಯರು ರಚಿಸಿದ ದುರ್ಬಲ ಲೋಕಪಾಲ ಮಸೂದೆಗೆ ಸಚಿವ ಸಂಪುಟ ನಿನ್ನೆ ಅಂಗೀಕಾರ ನೀಡಿತ್ತು.