ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಧಿವೇಶನ: ಲೋಕಸಭೆ ಮುಂದೂಡಿಕೆ, ರಾಜ್ಯಸಭೆಯಲ್ಲಿ ಕೋಲಾಹಲ (Monsoon session | Parliamentary debate | Manmohan Singh government | Opposition | Corruption issue)
ಅಧಿವೇಶನ: ಲೋಕಸಭೆ ಮುಂದೂಡಿಕೆ, ರಾಜ್ಯಸಭೆಯಲ್ಲಿ ಕೋಲಾಹಲ
ನವದೆಹಲಿ, ಸೋಮವಾರ, 1 ಆಗಸ್ಟ್ 2011( 14:02 IST )
PTI
ಮುಂಗಾರು ಅಧಿವೇಶನದ ಆರಂಭದ ದಿನವಾದ ಇಂದು,ಮಧ್ಯಂತರ ಅಧಿವೇಶನ ಸಂದರ್ಭದಲ್ಲಿ ಮೃತರಾದ ಹರಿಯಾಣಾ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸದಸ್ಯ ಭಜನ್ ಲಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಲೋಕಸಭೆಯ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಆದರೆ, ರಾಜ್ಯಸಭೆಯಲ್ಲಿ ಸರಕಾರದ ಭ್ರಷ್ಟಾಚಾರ ನಿಯಂತ್ರಣ ವೈಫಲ್ಯಕ್ಕೆ ವಿಪಕ್ಷಗಳು ಕೋಲಾಹಲ ಸೃಷ್ಟಿಸಿವೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನ ಆರಂಭವಾದ ನಂತರ ಕಳೆದ ಜೂನ್ 3 ರಂದು ನಿಧನರಾದ ಹರಿಯಾಣಾದ ಹಿಸ್ಸಾರ್ ಕ್ಷೇತ್ರದ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಭಜನ್‌ಲಾಲ್ ಅವರಿಗೆ ಸಂತಾಪ ಸೂಚಿಸಲಾಯಿತು. ಕಳೆದ ನಾಲ್ಕು ದಶಕಗಳಿಂದ ಬಡವರ ಜನಸಾಮಾನ್ಯರ ಪರ ಕಾರ್ಯನಿರ್ವಹಿಸಿದ್ದಲ್ಲದೇ ಸಮರ್ಥ ಅಡಳಿತಗಾರರಾಗಿದ್ದರು ಎಂದು ಸಭಾಪತಿ ಮೀರಾ ಕುಮಾರ್ ವರ್ಣಿಸಿದರು.
ಸಂಸತ್ತಿನ ದಿವಂಗತ ಮಾಜಿ ಸದಸ್ಯರಾದ ಧರ್ಮಾಭಿಕ್ಷಂ, ಶ್ರೀಬಾಚಾ ಡಿಗಲ್, ಶ್ರೀಪಾಲ್ ಸಿಂಗ್ ಯಾದವ್, ಎಲ್.ಎಸ್.ಟುರ್ ಮತ್ತು ಚತುರ್ನಾನ್ ಮಿಶ್ರಾ ಅವರಿಗೆ ಕೂಡಾ ಶೃದ್ಧಾಂಜಲಿ ಅರ್ಪಿಸಲಾಯಿತು.ನಾರ್ವೆ ಹಾಗೂ ಮುಂಬೈ ನಗರಗಳಲ್ಲಿ ನಡೆದ ದಾಳಿಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಲಾಯಿತು. ಉತ್ತರ ಪ್ರದೇಶದ ಠಾಣಾಗಾಂವ್ ಮತ್ತು ಫತೇಪುರ್ ನಗರಗಳಲ್ಲಿ ನಡೆದ ರೈಲ್ವೆ ದುರಂತದಲ್ಲಿ ಮೃತರಾದವರಿಗಾಗಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ರಾಜ್ಯಸಭೆಯಲ್ಲಿ ಕೋಲಾಹಲ
ರಾಜ್ಯಸಭೆಯಲ್ಲಿ ಅಧಿವೇಶನ ಆರಂಭವಾಗುತ್ತಿದ್ದಂತೆ 2ಜಿ ಹಗರಣ ಸೇರಿದಂತೆ ಹಲವು ಹಗರಣಗಳ ಕುರಿತಂತೆ ಸರಕಾರದ ವಿರುದ್ಧ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಹಾಗೂ ಇತರ ಪಕ್ಷಗಳು ಸರಕಾರದ ವಿರುದ್ಧ ಕೋಲಾಹಲ ಸೃಷ್ಟಿಸಿದವು.
ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಮೃತರಿಗೆ ಶೃದ್ಧಾಂಜಲಿ ಅರ್ಪಿಸಿದ ನಂತರ, ಮಾಜಿ ಟೆಲಿಕಾಂ ಸಚಿವ ಹಾಗೂ 2ಜಿ ಹಗರಣದ ಪ್ರಮುಖ ಆರೋಪಿ ಎ.ರಾಜಾ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳ ಬಗ್ಗೆ ಬಿಜೆಪಿ ಸದಸ್ಯರು ವಿವರಣೆ ನೀಡುವಂತೆ ಸರಕಾರವನ್ನು ಒತ್ತಾಯಿಸಿದರು.
ಬಿಜೆಪಿ ಸದಸ್ಯರಿಗೆ ಎಐಎಡಿಎಂಕೆ ಸದಸ್ಯರು ಬೆಂಬಲ ಸೂಚಿಸಿ, ಎ. ರಾಜಾ ಹೇಳಿಕೆಯನ್ನು ಪ್ರಕಟಿಸಿದ್ದ ತಮಿಳು ಪತ್ರಿಕೆಗಳನ್ನು ತೋರಿಸಿದರು. ಬಿಎಸ್‌ಪಿ ಪಕ್ಷದ ಸದಸ್ಯರು ರೈತರ ಪರ ಸಮಸ್ಯೆಗಳ ಬಗ್ಗೆ ಘೋಷಣೆಗಳನ್ನು ಕೂಗಿದರು.
ವಿರೋಧ ಪಕ್ಷಗಳ ಕೋಲಾಹಲದಿಂದಾಗಿ ತಮಗೆ ಸದಸ್ಯರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿಲ್ಲವೆಂದು ಪ್ರಕಟಿಸಿ, ಸದನವನ್ನು ಮಧ್ಯಾಹ್ನ 12ಗಂಟೆಯವರೆಗೆ ಮುಂದೂಡಿದ್ದರು.