ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಲೆಗಾಂವ್ ಬ್ಲಾಸ್ಟ್: ಆರೋಪಿಗಳಿಬ್ಬರಿಗೆ ಹೈಕೋರ್ಟ್ ಜಾಮೀನು (Malegaon blast | National Investigation Agency | Bombay High Court)
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗದಿರುವ ಹಿನ್ನೆಲೆಯಲ್ಲಿ, ಬಂಧಿತ ಇಬ್ಬರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದರಿಂದ ರಾಷ್ಟ್ರೀಯ ತನಿಖೆ ಸಂಸ್ಥೆಗೆ ಭಾರಿ ಹಿನ್ನೆಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಲೆಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ 2008ರಿಂದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಶಿವನಾರಾಯಣ್ ಕಲಸಂಗ್ರಾ ಮತ್ತು ಶ್ಯಾಮ್ ಸಾಹು ಅವರಿಗೆ ನ್ಯಾಯಾಲಯ ಒಂದು ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಪಡೆದು ಜಾಮೀನು ನೀಡಿದೆ.
ಆರೋಪಿಗಳು ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸೂಕ್ತ ಸಾಕ್ಷಿಗಳು ಲಭ್ಯವಿಲ್ಲ. ಪರಾರಿಯಾಗಿರುವ ಸ್ಫೋಟದ ಪ್ರಮುಖ ಆರೋಪಿ ರಾಮಚಂದ್ರ ಕಲಸಂಗ್ರಾ ಅವರೊಂದಿಗೆ ಗೆಳೆತನವಿದೆ ಎನ್ನುವುದನ್ನು ಹೊರತುಪಡಿಸಿದಲ್ಲಿ, ಆರೋಪಿಗಳ ವಿರುದ್ಧ ಸ್ಫೋಟದ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಕಂಡುಬಂದಿಲ್ಲವಾದ್ದರಿಂದ ಅವರಿಗೆ ಜಾಮೀನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಎ.ಎಂ.ತಿಪ್ಸೆ ಆದೇಶ ಹೊರಡಿಸಿದ್ದಾರೆ.
ಹಿಂದುತ್ವದ ಉಗ್ರ ಪ್ರತಿಪಾದಕ ರಾಮಚಂದ್ರ ಕಲಸಂಗ್ರಾ ಅವರ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಬಂಧಿತ ಇಬ್ಬರು ಆರೋಪಿಗಳಿಗೆ ಯಾವುದೇ ಮಾಹಿತಿಯಿರಲಿಲ್ಲ ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ಸ್ಪಷ್ಟವಾಗಿದ್ದರಿಂದ, ಸ್ಪೋಟದ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಳೆದ 2008ರ ಸೆಪ್ಟೆಂಬರ್ 19 ರಂದು ನಡೆದ ಮಾಲೆಗಾಂವ್ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.