ದರ ಏರಿಕೆ ನಿಯಂತ್ರಣಕ್ಕೆ ಸರಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುವ ವಿರೋಧಪಕ್ಷಗಳ ಹೇಳಿಕೆಯನ್ನು ತಿರಸ್ಕರಿಸಿದ ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಹಣದುಬ್ಬರ ನಿಯಂತ್ರಿಸಲು ನನ್ನ ಬಳಿ ಮಂತ್ರದಂಡವಿಲ್ಲ ಎಂದು ಮುಂಗಾರು ಅಧಿವೇಶನದಲ್ಲಿ ಹೇಳಿದ್ದಾರೆ.
ಗಂಭೀರ ಸಮಸ್ಯೆಯಾದ ಹಣದುಬ್ಬರ ನಿಯಂತ್ರಣಕ್ಕಾಗಿ ಸರಕಾರ ಮತ್ತು ವಿರೋಧ ಪಕ್ಷಗಳು ಒಂದಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. 14ನೇ ಲೋಕಸಭೆ ಅಧಿವೇಶನಗಳಲ್ಲಿ ಎಂಟು ಬಾರಿ ಮತ್ತು 15ನೇ ಲೋಕಸಭೆಯಲ್ಲಿ ಮೂರು ಬಾರಿ ಹಣದುಬ್ಬರ ದರ ಕುರಿತಂತೆ ಚರ್ಚಿಸಲಾಗಿದೆ. ಒಂದು ವೇಳೆ ನಾವು ಯಾವುದೇ ನಿರ್ಧಾರಕ್ಕೆ ಬಾರದಿದ್ದಲ್ಲಿ ಚರ್ಚೆ ನಡೆಸುವ ಅಗತ್ಯವೇನು? ಎಂದು ಪ್ರಣಬ್ ಪ್ರಶ್ನಿಸಿದ್ದಾರೆ.
ಭಾರತ ಯಾವತ್ತು ಅಭಿವೃದ್ಧಿಗೆ ಖ್ಯಾತಿ ಪಡೆದಿಲ್ಲ.1959 ರಿಂದ 1979ರವರೆಗೆ ಅಭಿವೃದ್ಧಿ ದರ ಕೇವಲ ಶೇ.3ರಷ್ಟಿತ್ತು. 1980ರ ಅವಧಿಯಲ್ಲಿ ಶೇ.5ಕ್ಕೆ ಏರಿಕೆ ಕಂಡಿತ್ತು. 1990ರ ಅವಧಿಯಲ್ಲಿ ಶೇ.6ಕ್ಕೆ ಚೇತರಿಕೆ ಕಂಡಿತು. ಆ ಸಮಯದಲ್ಲಿ ಹಣದುಬ್ಬರ ಇರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬೇಡಿಕೆ ಮತ್ತು ಪೂರೈಕೆಯಲ್ಲಿನ ಕಂದರದಿಂದಾಗಿ ಹಣದುಬ್ಬರ ದರ ಏರಿಕೆಗೆ ಕಾರಣವಾಗಿದೆ. ಕಡಿಮೆ ಅಭಿವೃದ್ಧಿ ದರದಿಂದ ಹಣದುಬ್ಬರ ದರ ಇಳಿಕೆಯಾಗಲಿದೆ ಎಂದು ಭಾವಿಸಿದಲ್ಲಿ ಅದು ಸೂಕ್ತ ನಿರ್ಧಾರವಲ್ಲ ಎಂದು ತಿಳಿಸಿದ್ದಾರೆ.
ಹಣದುಬ್ಬರ ದರ ಹೆಚ್ಚಳವಾಗಿದೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ.ಹಣದುಬ್ಬರ ದರ ಶೇ.5ರಷ್ಟಿರಬೇಕು. ಆದರೆ, ಸರಕಾರದ ನಿಯಂತ್ರಣದಿಂದ ತಪ್ಪಿಹೋಗಿದೆ. ಹಣದುಬ್ಬರ ದರ ನಿಯಂತ್ರಿಸಲು ನನ್ನ ಬಳಿ ಮಂತ್ರದಂಡವಿಲ್ಲ ಎಂದು ಸ್ಪಷ್ಟಪಡಿಸಿದರು.