ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಟಿಗಾಗಿ-ನೋಟು ಹಣದ ಮೂಲ ಬಹಿರಂಗಪಡಿಸಿ: ಸುಪ್ರೀಂ (Cash-for-votes | Scandal | Supreme Court | Delhi Police | Trust vote | Parliament)
ಓಟಿಗಾಗಿ-ನೋಟು ಹಣದ ಮೂಲ ಬಹಿರಂಗಪಡಿಸಿ: ಸುಪ್ರೀಂ
ನವದೆಹಲಿ, ಶುಕ್ರವಾರ, 5 ಆಗಸ್ಟ್ 2011( 13:12 IST )
PTI
ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿರುವ ಓಟಿಗಾಗಿ-ನೋಟು ಪ್ರಕರಣದ ಹಣದ ಮೂಲ ಯಾವುದನ್ನು ಕಂಡುಹಿಡಿಯಲೇ ಬೇಕು ಎಂದು ಸುಪ್ರೀಂಕೋರ್ಟ್ ತನಿಖಾಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2008ರಲ್ಲಿ ವಿಶ್ವಾಸ ಪಡೆಯುವ ಸಂದರ್ಭದಲ್ಲಿ ಓಟಿಗಾಗಿ ನೋಟು ನೀಡಿದೆ ಎನ್ನುವ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಕಾರ್ಯವೈಖರಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಮ್ ಮತ್ತು ಆರ್.ಎಂ.ಲೋಧಾ ನೇತೃತ್ವದ ಪೀಠ, ದೆಹಲಿ ಪೊಲೀಸರ ತನಿಖಾ ವರದಿಯನ್ನು ಪರಿಶೀಲಿಸಿದ್ದಾರೆ. ಮತ್ತೊಂದು ವರದಿಯನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡುವಂತೆ ಪೊಲೀಸರು ಕೋರಿದ್ದಾರೆ.
ಆದರೆ, ನ್ಯಾಯಾಲಯ ಮೂರು ವಾರಗಳ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆ ಸಂದರ್ಭದಲ್ಲಿ ಅಂತಿಮ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದ್ದಾರೆ.
2008ರ ಜುಲೈ 22 ರಂದು ವಿಶ್ವಾಸಮತ ನಡೆಯುವ ಮುನ್ನ ನೋಟುಗಳು ತುಂಬಿದ ಬ್ಯಾಗ್‌ಗಳನ್ನು ಬಿಜೆಪಿ ಸದಸ್ಯರು ತೋರಿಸಿ, ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದರು.
ಮಧ್ಯವರ್ತಿಯಿಂದ ಸಂಸದೀಯ ವ್ಯವಸ್ಥೆಗೆ ಧಕ್ಕೆ
ಓಟಿಗಾಗಿ-ನೋಟು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಕೀಳುದರ್ಜೆಯ ಮಧ್ಯವರ್ತಿಯಿಂದ ಸಂಸದೀಯ ವ್ಯವಸ್ಥೆಗೆ ಮಸಿ ಬಳೆಯಲು ಪ್ರಯತ್ನಿಸಿದ್ದಾರೆ ಎಂದು ಕಿಡಿಕಾರಿದೆ.
ಸಮಾಜವಾದಿ ಪಕ್ಷದ ಮಾಜಿ ಪ್ರದಾನ ಕಾರ್ಯದರ್ಶಿ ಅಮರ್ ಸಿಂಗ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಶ್ವಾಸಮತ ಸಂದರ್ಭದಲ್ಲಿ ಸರಕಾರವನ್ನು ಬೆಂಬಲಿಸಲು ನೀಡಿದ ಕರೆನ್ಸಿ ನೋಟುಗಳನ್ನು ತೋರಿಸಿದ ನಾಲ್ಕು ಮಂದಿ ಬಿಜೆಪಿ ಸಂಸದರು ಕೂಡಾ ಪ್ರಕರಣದಲ್ಲಿ ಶಂಕಿತರಾಗಿದ್ದಾರೆ ಎಂದು ದೆಹಲಿ ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.