ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಸೂಪರ್-ಮಿನಿಸ್ಟರ್ ಆಗಬೇಕಿಲ್ಲ: ಮೊಂಟೆಕ್ ಸಮರ್ಥನೆ (2G Scam | Planning Commission | Montek Singh Ahluwalia | Manmohan Singh)
ಪ್ರಧಾನಿ ಸೂಪರ್-ಮಿನಿಸ್ಟರ್ ಆಗಬೇಕಿಲ್ಲ: ಮೊಂಟೆಕ್ ಸಮರ್ಥನೆ
ನವದೆಹಲಿ, ಸೋಮವಾರ, 8 ಆಗಸ್ಟ್ 2011( 11:07 IST )
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿ ತಟ್ಟುತ್ತಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸಮರ್ಥಿಸಿಕೊಂಡಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಪ್ರಧಾನಿಯನ್ನು ದೂಷಿಸುವವರಿಗೆ ಸಂಪುಟವು ಹೇಗೆ ಕೆಲಸ ಮಾಡುತ್ತದೆ ಎಂಬುದರ ಅರಿವಿಲ್ಲ ಎಂದಿದ್ದಾರೆ. ಸಂಪುಟ ಕೈಗೊಳ್ಳುವ ಪ್ರತಿಯೊಂದು ನಿರ್ಣಯದ ಸೂಕ್ಷ್ಮಾತಿಸೂಕ್ಷ್ಮಗಳನ್ನು ಪ್ರಧಾನಿಯೇನೂ ನಿರ್ವಹಿಸುವುದಿಲ್ಲ ಮತ್ತು ಅವರು ಸೂಪರ್-ಮಿನಿಸ್ಟರ್ ಆಗಿ ವರ್ತಿಸಬೇಕಾಗಿಲ್ಲ ಎಂದೂ ಅವರು ಹೇಳಿದ್ದಾರೆ.
"2ಜಿ ಎಂಬುದು ದೊಡ್ಡ ಸಮಸ್ಯೆಯಾಗಿದೆ ಹೌದು. ಆದರೆ 2ಜಿ ಸಂಗತಿಯು ಪ್ರಧಾನಿ ಕಾರ್ಯಾಲಯದ ತಪ್ಪಿನಿಂದಾಗಿಯೇ ಸಮಸ್ಯೆಯಾಗಿದೆ ಎಂಬ ವಾದ ಸರಿಯಲ್ಲ" ಎಂದು ಟಿವಿ ಸಂದರ್ಶನವೊಂದರಲ್ಲಿ ಅಹ್ಲುವಾಲಿಯಾ ಹೇಳಿದ್ದಾರೆ.
2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯ ಇರಲಿ ಎಂಬುದಾಗಿ ಪ್ರಧಾನಿಯವರು ಅಂದಿನ ಟೆಲಿಕಾಂ ಸಚಿವ ಎ.ರಾಜಾ ಅವರಿಗೆ ಪತ್ರ ಬರೆದಿರುವುದು ಮತ್ತು ಮುಂದೇನಾಯಿತು ಎಂದು ಅತ್ತ ಕಡೆ ಪ್ರಧಾನಿ ತಲೆ ಹಾಕದ ಕುರಿತು ಉಲ್ಲೇಖಿಸುತ್ತಾ ಅವರು, ಈಗಿರುವ ನೀತಿಯನ್ನೇ ತಾನು ಅನುಸರಿಸುತ್ತಿರುವುದಾಗಿ ರಾಜಾ ಉತ್ತರಿಸಿದ್ದರಿಂದಾಗಿ ಸಿಂಗ್ ಅವರು ತಪ್ಪಿತಸ್ಥರು ಎಂದು ಹೇಳಲಾಗದು. ಪ್ರಧಾನಿ ಅವರು ಸೂಪರ್ ಮಿನಿಸ್ಟರ್ ಆಗಿ ವರ್ತಿಸಬೇಕೆಂದು ನನಗನಿಸುತ್ತಿಲ್ಲ ಎಂದು ಹೇಳಿದರು.
ಸ್ಪೆಕ್ಟ್ರಂ ಹಂಚಿಕೆಯಲ್ಲಿ ಮೊದಲು ಬಂದವರಿಗೆ ಆದ್ಯತೆ ಎಂಬ ನೀತಿಯನ್ನು ಬದಲಾಯಿಸಿರುವ ಕುರಿತು ಪ್ರಧಾನಿಯೇಕೆ ಸುಮ್ಮನಿದ್ದರು ಎಂದು ಕೇಳಿದಾಗ ಅಹ್ಲುವಾಲಿಯಾ, ಈ ವಿಷಯ ನ್ಯಾಯಾಂಗದಲ್ಲಿದೆ, ನಾನೇನೂ ಹೇಳುವಂತಿಲ್ಲ ಎಂದರು.