ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಉಪವಾಸಕ್ಕೆ 22 ಷರತ್ತು: ಓದಿ ನಗು ಬಾರದಿದ್ದರೆ ಕೇಳಿ!
(Anna Hazare | Fast un to death | Aug 16 | Corruption | Lokpal)
ಇದನ್ನು ಓದಿ ನಗು ಬಾರದಿದ್ದರೆ ಕೇಳಿ. ಒಂದು ಸರಕಾರವು ತರುತ್ತಿರುವ ತೀರಾ ದುರ್ಬಲವಾದ, ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ವಿರೋಧಿಸಿ, ಮಹಾತ್ಮ ಗಾಂಧೀಜಿ ಹೇಳಿಕೊಟ್ಟ ಶಾಂತಿಯುತ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆ ಮತ್ತು ಇತರ ಜನಲೋಕಪಾಲ ಸದಸ್ಯರಿಗೆ ಕೇಂದ್ರದ ಯುಪಿಎ ಸರಕಾರದಿಂದ ಪ್ರೇರಿತವಾದ ದೆಹಲಿ ಪೊಲೀಸರು ಒಡ್ಡಿರುವ ಷರತ್ತುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
ಇವನ್ನು ಪಾಲಿಸಿದರೆ ಮಾತ್ರವೇ ಒಂದೆರಡು ದಿನಗಳ, ತಪ್ಪಿದರೆ ಮೂರು ದಿನ (ಈ ಸ್ಥಳದ ಮಾಲೀಕರ ಅನುಮತಿಗಾಗಿ 'ಮನವೊಲಿಸುತ್ತೇವೆ') ಉಪವಾಸ ಮಾಡಲು ಅವಕಾಶ ಕೊಡುತ್ತೇವೆ ಎಂಬ ಒಕ್ಕಣೆಯೂ ಪೊಲೀಸರ ಪತ್ರದಲ್ಲಿದೆ!
ದೆಹಲಿ ಡಿಸಿಪಿ ಮಂಗೇಶ್ ಕಶ್ಯಪ್ ಅವರು ಅಣ್ಣಾ ಟೀಂಗೆ ವಿಧಿಸಿದ ಪ್ರತ್ಯೇಕ ಷರತ್ತುಗಳು: 1. ಶಾಂತಿ ಕಾಪಾಡಬೇಕು, ಉಪವಾಸ ಆರಂಭಿಸುವ ಮೊದಲು ಪೊಲೀಸರ ಎಲ್ಲ ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸಬೇಕು.
2. ಅಣ್ಣಾ ಹಜಾರೆ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ಅವರು ಇದಕ್ಕೆ ಸಮ್ಮತಿ ನೀಡಿ ಸಹಿ ಹಾಕಬೇಕು
3. ಆಗಸ್ಟ್ 18ರ ಸಂಜೆ 6 ಗಂಟೆಗೆ ಈ ಪಾರ್ಕು ತೆರವುಗೊಳಿಸುವುದಾಗಿ ಎಲ್ಲರೂ ಸಹಿ ಹಾಕಬೇಕು.
4. ಜಯಪ್ರಕಾಶ್ ನಾರಾಯಣ್ ಪಾರ್ಕಿನಲ್ಲಿರುವ ಸಾರ್ವಜನಿಕ ಆಸ್ತಿಗೆ, ಅಂದರೆ ಕಟ್ಟಡಗಳಿಗೆ, ಮರಗಳಿಗೆ ಯಾವುದೇ ರೀತಿಯಲ್ಲಿಯೂ ಹಾನಿ ಮಾಡಬಾರದು.
5. ಅಲ್ಲಿ 4000/5000ಕ್ಕಿಂತ ಹೆಚ್ಚು ಜನರು ಸೇರಬಾರದು. ಅವರು ರಸ್ತೆಗೆ ಬರಬಾರದು. ವ್ಯವಸ್ಥಿತವಾಗಿ ಕೂತಿರಬೇಕು.
6. ಸರಕಾರಿ ವೈದ್ಯ ಅಧಿಕಾರಿಗಳೇ ಉಪವಾಸ ನಿರತರನ್ನು ದಿನಕ್ಕೆ ಕನಿಷ್ಠ ಮೂರು ಬಾರಿ ಪರೀಕ್ಷಿಸುತ್ತಾರೆ ಮತ್ತು ಯಾರನ್ನಾದರೂ ಆಸ್ಪತ್ರೆಗೆ ಸೇರಿಸಬೇಕೆಂದು ಅವರು ನೀಡುವ ನಿರ್ಧಾರವೇ ಅಂತಿಮ. ಬೇರೆ ಯಾವುದೇ ಖಾಸಗಿ ವೈದ್ಯರ ಯಾವುದೇ ಸಲಹೆಗಳನ್ನೂ ಸ್ವೀಕರಿಸುವುದಿಲ್ಲ.
7. 50 ಕಾರುಗಳು ಮತ್ತು 50 ದ್ವಿಚಕ್ರ ವಾಹನಗಳಿಗೆ ಮಾತ್ರವೇ ಪಾರ್ಕಿನ ಸುತ್ತ ನಿಲ್ಲಿಸಲು ಅವಕಾಶವಿದೆ. ಉಳಿದ ಬಸ್ಸುಗಳು, ಟ್ರಕ್ಕುಗಳು, ಕಾರುಗಳನ್ನು ಸಂಚಾರಿ ಪೊಲೀಸರ ಅನುಮತಿಯೊಂದಿಗೆ ಬೇರೆ ಕಡೆ ನಿಲ್ಲಿಸಬೇಕು.
8. ಸತ್ಯಾಗ್ರಹಿಗಳಿಂದಾಗಿ ಎಲ್ಲಿಯೂ ಕೂಡ ಸಂಚಾರ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು.
9. ಡಿಸಿಪಿಯಿಂದ ಅನುಮತಿ ಪಡೆಯದ ಹೊರತು ಮೈಕ್, ಧ್ವನಿವರ್ಧಕ ಬಳಸಬಾರದು.
10. ತಮ್ಮ ಬೆಂಬಲಿಗರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಹೊಣೆ ಸತ್ಯಾಗ್ರಹದ ಸಂಘಟಕರದ್ದೇ. ಇದಕ್ಕೆ ವಿಫಲರಾದರೆ, ಸಂಘಟಕರು ಮತ್ತು ಪ್ರತಿಭಟನಾಕಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಇನ್ನು ಪ್ರತಿಭಟನಾಕಾರರು ಈ ರೀತಿ ಬರೆದುಕೊಟ್ಟು ಐವರು ಕೂಡ ಸಹಿ ಹಾಕಬೇಕಂತೆ! 1. ಆಗಸ್ಟ್ 16ರ ಬೆಳಿಗ್ಗೆ 6 ಗಂಟೆಯಿಂದ ಆಗಸ್ಟ್ 18ರ ಸಂಜೆ 6 ಗಂಟೆವರೆಗೆ ಮಾತ್ರ ಜಯಪ್ರಕಾಶ್ ನಾರಾಯಣ್ ಪಾರ್ಕಿನಲ್ಲಿ ಉಪವಾಸ ಮಾಡುತ್ತೇವೆ.
2. ಸಾರ್ವಜನಿಕ ಆಸ್ತಿಪಾಸ್ತಿಗೆ ಅಂದರೆ ಕಟ್ಟಡ, ಮರಗಿಡಗಳಿಗೆ ಹಾನಿ ಮಾಡುವುದಿಲ್ಲ. ಧರಣಿ ಆದ ನಂತರ ಮೊದಲಿದ್ದ ರೀತಿಯಲ್ಲೇ ಪಾರ್ಕನ್ನು ಮರಳಿಸುತ್ತೇವೆ.
3. 4000/5000ಕ್ಕಿಂತ ಹೆಚ್ಚು ಜನ ಸೇರಿಸುವುದಿಲ್ಲ. ವ್ಯವಸ್ಥಿತರಾಗಿರಿಸುತ್ತೇವೆ, ರಸ್ತೆಗೆ ಜನರು ತುಂಬಿ ತುಳುಕುವುದಿಲ್ಲ.
4. ಸರಕಾರಿ ವೈದ್ಯಾಧಿಕಾರಿಗಳಿಂದಲೇ ಪರೀಕ್ಷೆಗೆ ಒಳಪಡುತ್ತೇವೆ. ಬೇರಾವುದೇ ನಮ್ಮದೇ ವೈದ್ಯರನ್ನು ಕರೆ ತರುವುದಿಲ್ಲ. ಬಲವಂತವಾಗಿ ಆಸ್ಪತ್ರೆಗೆ ಸೇರಿಸಲು ಹೇಳಿದರೆ ಸೇರುತ್ತೇವೆ.
5. 50 ಕಾರುಗಳು, 50 ದ್ವಿಚಕ್ರ ವಾಹನಗಳು ಮಾತ್ರ ಪಾರ್ಕ್ ಪರಿಸರದಲ್ಲಿ ನಿಲ್ಲಿಸುತ್ತೇವೆ. ಉಳಿದವನ್ನು ನೀವು ಹೇಳಿದಲ್ಲಿ ಪಾರ್ಕ್ ಮಾಡಿಸುತ್ತೇವೆ.
6. ಸತ್ಯಾಗ್ರಹಿಗಳಿಂದ ಸಂಚಾರಕ್ಕೆ ಎಲ್ಲೂ, ಯಾವುದೇ ತೊಡಕು ಉಂಟು ಮಾಡುವುದಿಲ್ಲ.
7. ಧ್ವನಿ ವರ್ಧಕ ಬಳಸುವುದಿಲ್ಲ.
8. ಬೆಂಬಲಿಗರನ್ನು ನಾವು ನಿಯಂತ್ರಣದಲ್ಲಿಟ್ಟುಕೊಳ್ಳುತ್ತೇವೆ. ತಪ್ಪಿದರೆ ಕ್ರಮಕ್ಕೆ ಬದ್ಧರಾಗಿದ್ದೇವೆ.
9. ಗುಂಪು ನಿಯಂತ್ರಿಸಲು ಸೂಕ್ತ ಸ್ವಯಂಸೇವಕರು/ಭದ್ರತಾ ಜವಾನರನ್ನು ನಾವೇ ನಿಯಮಿಸುತ್ತೇವೆ.
10. ಪೊಲೀಸರು ಯಾವುದೇ ಕ್ಷಣ ಸಂಪರ್ಕಿಸಬಹುದಾದ ಕನಿಷ್ಠ ಮೂವರು ಹೊಣೆಗಾರರ ಹೆಸರು ಮತ್ತು ದೂರವಾಣಿ ಸಂಖ್ಯೆ ಕೊಡುತ್ತೇವೆ.
11. ಕುಡಿಯುವ ನೀರು, ಪ್ರಥಮ ಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆಗೆ ಸೂಕ್ತ ಏರ್ಪಾಟು ಮಾಡಿಕೊಳ್ಳುತ್ತೇವೆ.
12. ಸಮರ್ಪಕ ಪ್ರಮಾಣದಲ್ಲಿ ಸಂಚಾರಿ ಟಾಯ್ಲೆಟ್‌ಗಳಿಗೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.
13. ಸೂಕ್ತ ವಿದ್ಯುತ್ ಬೆಳಕಿನ ವ್ಯವಸ್ಥೆ, ಜನರೇಟರ್ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.
14. ಧರಣಿಯಲ್ಲಿ ಪಾಲ್ಗೊಳ್ಳುವವರು ಲಾಠಿಗಳು, ಕತ್ತಿ, ಚೂರಿ ಮತ್ತಿತರ ಆಯುಧಗಳನ್ನು ಒಯ್ಯುವುದಿಲ್ಲ. ಅಂತೆಯೇ, ಸ್ಟೆನ್ ಗನ್, ಕಾರ್ಬೈನ್ ಅಥವಾ ಎ.ಕೆ.-47, ಪಿಸ್ತೂಲ್, ರೈಫಲ್ ಅಥವಾ ಯಾವುದೇ ಆಯುಧವನ್ನು ಹೋಲುವ ನಕಲಿ ಗನ್ನುಗಳನ್ನೂ ಒಯ್ಯುವುದಿಲ್ಲ. ಧ್ವಜ, ಬ್ಯಾನರ್ ಬಳಸಬಹುದು.
15. ಯಾರೂ ಕೂಡ ಪ್ರಚೋದನಕಾರಿ ಭಾಷಣ, ಭಾಷಾ ಪ್ರಯೋಗ ಮಾಡುವುದಿಲ್ಲ.
16. ದೆಹಲಿ ಡಿಸಿಪಿ ನೀಡಿದ ನಿರ್ದೇಶನಗಳೆಲ್ಲವನ್ನೂ ಪಾಲಿಸುತ್ತೇವೆ.
17. ಸಾರ್ವಜನಿಕ ಸೊತ್ತಿಗೆ ಹಾನಿ, ಸರಕಾರಿ ನೌಕರರ ಮೇಲೆ ಹಲ್ಲೆ, ಹಾನಿ ಮಾಡುವುದಿಲ್ಲ.
18. ಯಾವುದೇ ಪೂಜಾಸ್ಥಳ, ಪವಿತ್ರ ಸ್ಥಳಗಳಿಗೆ ಯಾರು ಕೂಡ ಹಾನಿ ಮಾಡಬಾರದು. ಧರ್ಮ, ಜಾತಿ ನಿಂದಿಸುವುದಿಲ್ಲ.
19. ಧಾರ್ಮಿಕ ಸ್ಥಳದ 200 ಮೀಟರ್ ಪರಿಧಿಯೊಳಗೆ ಪ್ರಚೋದನಕಾರಿ ಸ್ಲೋಗನ್ ಕೂಗುವುದಿಲ್ಲ.
20. ಯಾವುದೇ ರಸ್ತೆಯಲ್ಲಿಯೂ ಶಾಮಿಯಾನ ಹಾಕುವುದಿಲ್ಲ.
21. ಪಟಾಕಿ ಸಿಡಿಸುವುದಿಲ್ಲ.
22. ಬೆಂಬಲಿಗರನ್ನು ನಿಯಂತ್ರಿಸುವ ಜವಾಬ್ದಾರಿ ನಮ್ಮದೇ. ತಪ್ಪಿದರೆ ನಾನು ಮತ್ತು ಇತರ ಸಂಘಟಕರು, ಪ್ರತಿಭಟನಾಕಾರರನ್ನು ಕಾನೂನಿನ ಪ್ರಕಾರ ಶಿಕ್ಷಿಸಬಹುದಾಗಿದೆ. ಸಹಿಗಳು (ಅಣ್ಣಾ ಹಜಾರೆ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಕಿರಣ್ ಬೇಡಿ, ಅರವಿಂದ ಕೇಜ್ರಿವಾಲ್)
ಪ್ರಬಲ ಲೋಕಪಾಲ ಮಸೂದೆ ತರುವವರೆಗೂ ಸತ್ತರೂ ಪರವಾಗಿಲ್ಲ, ಬಲಿದಾನ ಮಾಡಲು ಸಿದ್ಧ. ಸರಕಾರ ಮಣಿಯದಿದ್ದರೆ ಹೀಗಾಗಿ ಮರಣದವರೆಗೂ ಉಪವಾಸ ಮಾಡಲು ಸಿದ್ಧ ಎಂದಿರುವ ಅಣ್ಣಾ ಹಜಾರೆಗೆ ಈ ರೀತಿ (ಎರಡುವರೆ ದಿನ ಮತ್ತು ನಮ್ಮದೇ ವೈದ್ಯರು ಹೇಳಿದಂತೆ ಆಸ್ಪತ್ರೆಗೆ ದಾಖಲಾಗಬೇಕು) ಷರತ್ತು ವಿಧಿಸಿರುವುದು ಕೋಳಿಯನ್ನು ಕೇಳಿ ಮಸಾಲೆ ಅರೆದಂತೆ. ನೀವೇನು ಹೇಳುತ್ತೀರಿ ಸರಕಾರದ ಈ ಕಾರ್ಯತಂತ್ರದ ಬಗ್ಗೆ?