ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆ ನಿರಶನಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು (Anna Hazare | Team Anna | Lokpal Bill)
PTI
ಜನಲೋಕಪಾಲ ಮಸೂದೆ ಜಾರಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ದೆಹಲಿ ಪೊಲೀಸರ ಷರತ್ತುಗಳನ್ನು ತಿರಸ್ಕರಿಸಿದ್ದರಿಂದ ನಾಳೆಯಿಂದ ಜೈಪ್ರಕಾಶ್ ನಾರಾಯಣ್ ಪಾರ್ಕ್‌ನಲ್ಲಿ ನಡೆಯಬೇಕಿದ್ದ ಅವರ ಆಮರಣ ನಿರಶನಕ್ಕೆ ಅನುಮತಿ ನಿರಾಕರಿಸಲಾಗಿದೆ.

ದೆಹಲಿ ಪೊಲೀಸರ 22 ಷರತ್ತುಗಳಲ್ಲಿ ಕೇವಲ 16 ಷರತ್ತುಗಳನ್ನು ಮಾತ್ರ ಒಪ್ಪಿಕೊಳ್ಳಲು ಸಿದ್ಧ. ಆದರೆ ಉಳಿದ ಆರು ಷರತ್ತುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಸ್ಪಷ್ಟಪಡಿಸಿದ್ದರಿಂದ ಆಮರಣ ನಿರಶನಕ್ಕೆ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ.

ವಿಶೇಷ ಪೊಲೀಸ್ ಆಯುಕ್ತ ಧರ್ಮೇಂದ್ರ್ ಪ್ರಕಾಶ್ ಮಾತನಾಡಿ, ಜೆಪಿ ಪಾರ್ಕ್‌ನಲ್ಲಿ ನಡೆಸಲು ಉದ್ದೇಶಿಸಲಾದ ಆಮರಣ ನಿರಶನಕ್ಕಾಗಿ ದೆಹಲಿ ಪೊಲೀಸರ 22 ಷರತ್ತುಗಳನ್ನು ಒಪ್ಪಿಕೊಳ್ಳಲು ಹಜಾರೆ ತಂಡ ನಿರಾಕರಿಸಿದ್ದರಿಂದ ಅನುಮತಿ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.

ಜೈ ಪ್ರಕಾಶ್ ನಾರಾಯಣ್ ಪಾರ್ಕ್‌ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಯಾರನ್ನು ಒಳಗೆ ಬಿಡಲಾಗುವುದಿಲ್ಲ. ಒಂದು ವೇಳೆ, ಅಣ್ಣಾ ಹಜಾರೆ ಪಾರ್ಕ್ ಪ್ರವೇಶಿಸಲು ಯತ್ನಿಸಿದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಆಮರಣ ನಿರಶನಕ್ಕೆ ಮೂರು ದಿನಗಳ ಗಡುವು, ಪಾರ್ಕ್‌ನಲ್ಲಿ ಸೇರುವ ಪ್ರತಿಭಟನಾಕಾರರ ಸಂಖ್ಯೆ ನಿಗದಿ ಮತ್ತು ಸರಕಾರ ನೇಮಕ ಮಾಡಿದ ವೈದ್ಯರಿಂದ ಚಿಕಿತ್ಸೆಯಂತಹ ಮೂರು ಷರತ್ತುಗಳಿಗೆ ಹಜಾರೆ ತಂಡ ಒಪ್ಪಿಕೊಂಡಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಹಜಾರೆ ತಂಡದ ಸದಸ್ಯೆ ಕಿರಣ್ ಬೇಡಿ ಮಾತನಾಡಿ, ಮುಂದಿನ ನಡೆ ಬಗ್ಗೆ ಶೀಘ್ರವಾಗಿ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಕೆಂಪುಕೋಟೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಪಾಲ ವಿಷಯದ ಬಗ್ಗೆ ಅಣ್ಣಾ ಹಜಾರೆ ಆಮರಣ ನಿರಶನ ನಡೆಸುವುದು ಸೂಕ್ತವಲ್ಲ ಎಂದು ಹೇಳಿಕೆ ನೀಡಿರುವುದು ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ 'ಸೂಕ್ಷ್ಮಗ್ರಾಹಿ'ಯಲ್ಲದ ವ್ಯಕ್ತಿ ಎಂದು ಹಜಾರೆ ತಂಡ ಟೀಕಿಸಿದ್ದರಿಂದ, ಹಜಾರೆ ತಂಡದ ವಿರುದ್ಧ ಕಾಂಗ್ರೆಸ್ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಟೀಂ ಅಣ್ಣಾ, ಲೋಕಪಾಲ ಮಸೂದೆ, ಯುಪಿಎ, ಕಾಂಗ್ರೆಸ್