ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶಾದ್ಯಂತ ಗಾಂಧಿವಾದಿ ಅಣ್ಣಾ ಹಜಾರೆಗೆ ಭಾರಿ ಬೆಂಬಲ (Support | Anna Hazare | Protests | Country | Lokpal Bill)
PTI
ಭ್ರಷ್ಟಾಚಾರದ ವಿರುದ್ಧ ಸಮರ ಘೋಷಿಸಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಗೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದ್ದು, ಸ್ವಾತಂತ್ರ್ಯ ನಂತರದ ಬೃಹತ್ ಚಳುವಳಿ ಎನ್ನುವ ಖ್ಯಾತಿಗೊಳಗಾಗಿದೆ.

ದೆಹಲಿ, ಮುಂಬೈ, ಪುಣೆ, ಪಾಟ್ನಾ, ಲಕ್ನೋ, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಸೇರಿದಂತೆ ದೇಶಾದ್ಯಂತ ಭಾರಿ ಪ್ರಮಾಣದ ಪ್ರತಿಭಟನೆಗಳು, ಮೆರವಣಿಗೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.

ವರದಿಗಳ ಪ್ರಕಾರ, ಅಣ್ಣಾ ಹಜಾರೆಯ ಗ್ರಾಮವಾದ ರಾಲೇಗಾನ್ ಸಿದ್ಧಿಯಲ್ಲಿ, ಅಣ್ಣಾ ಹಜಾರೆ ಬಂಧನ ವಿರೋಧಿಸಿ ಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಮುಂಬೈ ಮತ್ತು ಪುಣೆ ನಗರಗಳಲ್ಲಿ ಕೂಡಾ ಅನೇಕ ಪ್ರತಿಭಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಅಣ್ಣಾ ಹಜಾರೆಯವರ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಮುಂಬೈ ಮತ್ತು ಪುಣೆ ನಗರಗಳಲ್ಲಿರುವ ಪ್ರತಿಭಟನಾಕಾರರು 230 ಕಿ.ಮೀ ದೂರದಲ್ಲಿರುವ ರಾಲೇಗಾನ್ ಸಿದ್ಧಿ ಗ್ರಾಮಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಪುಣೆ, ಅಹ್ಮದ್‌ನಗರ್, ಔರಂಗಾಬಾದ್ ಮತ್ತು ನಾಶಿಕ್ ಜಿಲ್ಲೆಗಳಿಂದ ರಾಲೇಗಾನ್ ಸಿದ್ಧಿ ಗ್ರಾಮಕ್ಕೆ ತೆರಳುವ ರಸ್ತೆಗಳು ಸೇರಿದಂತೆ ಗ್ರಾಮದಲ್ಲಿ ಕೂಡಾ ವ್ಯಾಪಕ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.

ಪುಣೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಅಣ್ಣಾ ಬಂಧನ ವಿರೋಧಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಮುಂಬೈನ ದಾದರ್ ಪ್ರದೇಶದಲ್ಲಿ ಕೂಡಾ ಅಣ್ಣಾ ಪರ ಕಾರ್ಯಕರ್ತರು ಸಭೆ ಸೇರಿ ಮುಂದಿನ ರೂಪರೇಷೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಮುಂಬೈನ ಆಜಾದ್ ಮೈದಾನ್‌ನಲ್ಲಿ ಪ್ರತಿಭಟನೆಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರಪ್ರದೇಶದ ಲಕ್ನೋ, ಹಜರತ್ ಗಂಜ್, ಗೊಮ್ತಿ ನಗರ್, ಅಲಿಗಂಜ್ ಮತ್ತು ವಿಕಾಸ್ ನಗರ್ ಜಿಲ್ಲೆಗಳಲ್ಲಿ ಅಣ್ಣಾ ಪರ ಹೋರಾಟ ಆರಂಭವಾಗಿದೆ. ಕೇಂದ್ರದ ಯುಪಿಎ ಸರಕಾರ ಹಾಗೂ ದೆಹಲಿ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಆಮರಣ ನಿರಶನ ಆರಂಭಿಸಲಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಪ್ರತಿಭಟನೆ, ಲೋಕಪಾಲ ಮಸೂದೆ