ಲೋಕಪಾಲ ಮಸೂದೆಗಾಗಿ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ಬಂಧನವನ್ನು ಸಮರ್ಥಿಸಿಕೊಂಡ ಕೇಂದ್ರ ಗೃಹಸಚಿವ ಪಿ.ಚಿದಂಬರಂ, ನಿಷೇದಾಜ್ಞೆ ಉಲ್ಲಂಘಿಸುವುದು ಖಚಿತವಾದ ಹಿನ್ನೆಲೆಯಲ್ಲಿ ಅಣ್ಣಾ ಮತ್ತು ಅವರ ಬೆಂಬಲಿಗರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಅಣ್ಣಾ ಹಜಾರೆಯವರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡ ನಂತರ, ಸಿವಿಲ್ ಲೈನ್‌ನಲ್ಲಿ ಪೊಲೀಸ್ ಆಫೀಸರ್ಸ್ ಮೆಸ್‌ಗೆ ಕರೆದುಕೊಂಡ ಹೋದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಅಣ್ಣಾ ಹಜಾರೆಯವರನ್ನು ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿದಾಗ ತಾವು ನಿಷೇದಾಜ್ಞೆಯನ್ನು ಉಲ್ಲಂಘಿಸುವುದಾಗಿ ಹೇಳಿಕೆ ನೀಡಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 151 ಕಾನೂನಿನಡಿ ಪೊಲೀಸರು ಬಂಧಿಸಿದ್ದಾರೆ ಎಂದು ದೆಹಲಿ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಅಣ್ಣಾ ಹಜಾರೆ ತಂಡದ ಆರು ಮಂದಿ ಸದಸ್ಯರು ಸೇರಿದಂತೆ, ನವದೆಹಲಿಯಾದ್ಯಂತ 1,200-1,300 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಚಿದಂಬರಂ ವಿವರಣೆ ನೀಡಿದ್ದಾರೆ.
ಆಮರಣ ನಿರಶನಕ್ಕಾಗಿ ದೆಹಲಿ ಪೊಲೀಸರ ಹೇರಿದ ಷರತ್ತುಗಳ ಬಗ್ಗೆ ತಕರಾರುಗಳಿದ್ದಲ್ಲಿ, ಅಣ್ಣಾ ಹಜಾರೆ ತಂಡ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಹಜಾರೆ ತಂಡದ ಸದಸ್ಯರು ನ್ಯಾಯಾಲಯಕ್ಕೆ ತೆರಳಲು ಮುಕ್ತ ಅವಕಾಶಗಳಿವೆ ಎಂದು ಹೇಳಿದ್ದಾರೆ.
ಜನಲೋಕಪಾಲ ಮಸೂದೆಯನ್ನು ಪರಿಗಣಿಸಬೇಕು ಎನ್ನುವ ಹಜಾರೆ ನಿಲುವು ಅಸಂಬದ್ಧ ಎಂದು ಟೀಕಿಸಿದ ಸಚಿವ ಚಿದಂಬರಂ, ಮೈದಾನದಲ್ಲಿ ಕುಳಿತ ಸಾಮಾಜಿಕ ಕಾರ್ಯಕರ್ತರಿಂದ ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪಿ.ಚಿದಂಬರಂ ವ್ಯಂಗ್ಯವಾಡಿದರು.