ದೇಶವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರವೆಂಬ ಭೂತವನ್ನು ಹತ್ಯೆಗೈಯಲು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತಿದ್ದೇನೆ. ನೀವು ಕೂಡಾ ಹಜಾರೆಯವರನ್ನು ಬೆಂಬಲಿಸಿ ಎಂದು ಬಾಲಿವುಡ್ ನಟಿ ಬಿಪಾಶಾ ಬಸು ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಅಣ್ಣಾ ಹಜಾರೆ ದೇಶದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದ್ದಾರೆ. ದೇಶಾದ್ಯಂತ ಜನತೆ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕಾಗಿ ಬೀದಿಗಿಳಿದಿದ್ದಾರೆ. ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಬಂಧನ ಖಂಡನಾರ್ಹ ಎಂದು ಬಸು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಾಲಿವುಡ್‌ನ ಅನೇಕ ನಟನಟಿಯರು ಕೂಡಾ ಟ್ವಿಟ್ಟರ್‌ನಲ್ಲಿ ತಮ್ಮ ಸಂದೇಶವನ್ನು ರವಾನಿಸಿ, ಹಜಾರೆಯವರಿಗೆ ಬೆಂಬಲ ಸೂಚಿಸಿದ್ದಾರೆ.
ಬಾಲಿವುಡ್‌ನ ಖ್ಯಾತ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬಾನಾ ಆಜ್ಮಿ ಟ್ವಿಟ್ಟರ್‌ನಲ್ಲಿ ಸಂದೇಶವನ್ನು ರವಾನಿಸಿ, ಅಣ್ಣಾ ಹಜಾರೆ ಬಂಧನ ಖಂಡನಾರ್ಹವಾಗಿದೆ. ದೇಶದಲ್ಲಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಪ್ರತಿಯೊಬ್ಬ ನಾಗರಿಕ ಪಡೆದಿದ್ದಾರೆ ಎಂದು ಸರಕಾರದ ನಿಲುವಿನ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಟಿ ಮಿನಿಷಾ ಲಾಂಬಾ, ಸಮಾಜ ಸುಧಾರಕ ಅಣ್ಣಾ ಹಜಾರೆಯವರನ್ನು ಬಂಧಿಸಿ, ವಿಶ್ವಕ್ಕೆ ನಾವು ಎಂತಹ ಸೂಪರ್ ಪವರ್ ಎನ್ನುವುದನ್ನು ಸರಕಾರ ತೋರಿಸಿಕೊಟ್ಟಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಡೆಲ್ ಮತ್ತು ನಟ ಮಿಲಿಂದ್ ಸೋಮನ್, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಳ್ಳಲು ನಮಗೆ ಸಾಧ್ಯವಾಗಿರಲಿಲ್ಲ. ಇದೀಗ, ಅಣ್ಣಾ ಹಜಾರೆಯವರ ಚಳುವಳಿಯಲ್ಲಿ ಪಾಲ್ಗೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಿದ್ಧರಾಗಿ ಎಂದು ಕರೆ ನೀಡಿದ್ದಾರೆ.
ತಮಿಳಿನ ಖ್ಯಾತ ನಟ ಆರ್.ಮಾಧವನ್, ಜನಲೋಕಪಾಲ ಮಸೂದೆ ಜಾರಿಗೆ ತರಲು ಸರಕಾರ ಹೆದರುತ್ತಿದೆಯೇ?. ಒಂದು ವೇಳೆ ಜಾರಿಗೆ ತಂದಲ್ಲಿ ತಮ್ಮನ್ನೇ ಕಚ್ಚುತ್ತದೆ ಎನ್ನುವ ಭೀತಿಯೇ ಎಂದು ಕಿಡಿಕಾರಿದ್ದಾರೆ.
ಬಾಲಿವುಡ್ ಚಿತ್ರ ತಯಾರಕರಾದ ಅನುರಾಗ್ ಕಶ್ಯಪ್ ಮತ್ತು ಶೇಖರ್ ಕಪೂರ್, ಸರಕಾರದ ವಿಶ್ವಸಾರ್ಹತೆ ಪ್ರಶ್ನಿಸಿ, ಶಾಂತಿಯುತ ಹೋರಾಟ ತಡೆಯಲು ಕಾಂಗ್ರೆಸ್ ಪೊಲೀಸ್ ಬಲವನ್ನು ಬಳಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.