ಗಾಂಧಿವಾದಿ ಅಣ್ಣಾ ಹಜಾರೆ ಅಲೆ ಕೇವಲ ದೇಶದಲ್ಲಿ ಮಾತ್ರ ಹರಡಿಲ್ಲ. ಇದೀಗ ವಿದೇಶಗಳಿಗೂ ವ್ಯಾಪಿಸುತ್ತಿದೆ. ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸುವಂತೆ ಒತ್ತಾಯಿಸಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಉದ್ಯಮಿಯೊಬ್ಬರು ಸೆಪ್ಟೆಂಬರ್ 12 ರಿಂದ ಆಮರಣ ನಿರಶನ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಹಜಾರೆಯವರನ್ನು ಗೌರವಿಸುವುದಾಗಿ ಹೇಳಿದ ಜೆಹಾಗೀರ್ ಅಖ್ತರ್, ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ಗಂಭೀರ ರೋಗವಾಗಿದೆ ಎಂದು ಕಿಡಿಕಾರಿದ್ದಾರೆ.
ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಕಾನೂನು ರೂಪಿಸುತ್ತಿರುವಂತೆ, ಪಾಕಿಸ್ತಾನದ ಸಂಸತ್ತು ಕೂಡಾ ಭ್ರಷ್ಟಾಚಾರ ವಿರೋಧಿ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸಂಸತ್ತಿನಲ್ಲಿ ಭ್ರಷ್ಟಾಚಾರ ವಿರೋಧಿ ಮಸೂದೆಯನ್ನು ಮಂಡಿಸಬೇಕು ಎನ್ನುವುದು ತಮ್ಮ ಬೇಡಿಕೆಯಾಗಿದೆ ಎಂದು ಹಜಾರೆ ಬೆಂಬಲಿಗ ಅಖ್ತರ್ ಹೇಳಿದ್ದಾರೆ.
ಭಾರತದ ಸಂಸತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿ ಯಾವ ಮಸೂದೆ ಜಾರಿಗೆ ತರುತ್ತದೆಯೋ ಅದೇ ಮಸೂದೆಯನ್ನು ಪಾಕಿಸ್ತಾನದಲ್ಲಿ ಕೂಡಾ ಮಂಡಿಸಬೇಕು. ಪಾಕಿಸ್ತಾನದಲ್ಲಿ ಭಾರತಕ್ಕಿಂತ ಹೆಚ್ಚಿನ ಭ್ರಷ್ಟಾಚಾರವಿದೆ ಎಂದು ಕಿಡಿಕಾರಿದ್ದಾರೆ.
ಆಮರಣ ನಿರಶನ ಮೊದಲ ಬಾರಿಗೆ ಆರಂಭಿಸುತ್ತಿಲ್ಲ. ಕಳೆದ ಬಾರಿ ವರ್ತಕರನ್ನು ಒತ್ತಾಯಪೂರ್ವಕವಾಗಿ ಒಕ್ಕಲೆಬ್ಬಿಸುತ್ತಿರುವಾಗ ವರ್ತಕರ ಪರವಾಗಿ 22 ದಿನಗಳವರೆಗೆ ಆಮರಣ ನಿರಶ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರ, ಪಾಕಿಸ್ತಾನದ ಸ್ಥಿರತೆಗೆ ಭಾರತದಿಂದ ಆಪಾಯವಿದೆ ಎನ್ನುವ ಭ್ರಮೆಯಿಂದಾಗಿ ಪಾಕಿಸ್ತಾನದ ಸೇನಾ ಬಜೆಟ್ ಮನಬಂದಂತೆ ಹೆಚ್ಚಳಗೊಳಿಸುತ್ತಿರುವುದು ಕೂಡಾ ಆಮರಣ ನಿರಶನ ಸಂದರ್ಭದಲ್ಲಿ ಪ್ರಸ್ತಾಪಕ್ಕೆ ಬರಲಿದೆ ಎಂದು ಹೇಳಿದ್ದಾರೆ.