ಸಶಕ್ತ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, 15 ದಿನಗಳ ಆಮರಣ ನಿರಶನವನ್ನು ರಾಮಲೀಲಾ ಮೈದಾನದಲ್ಲಿ ಮುಂದುವರಿಸಲಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಅಣ್ಣಾ ಹಜಾರೆ ತಿಹಾರ್ ಜೈಲಿನಿಂದ 11.30 ಗಂಟೆಗೆ ಹೊರಬಂದು, ನೇರವಾಗಿ ರಾಮಲೀಲಾ ಮೈದಾನಕ್ಕೆ ತೆರಳಲಿದ್ದಾರೆ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಆಮರಣ ನಿರಶನ ಆರಂಭಕ್ಕೆ ಮುನ್ನ ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾದಿ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಣ್ಣಾ ಹಜಾರೆ ಜೈಲಿನಿಂದ ಹೊರಬಂದ ಕೂಡಲೇ ಜನಸಮೂಹವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ರಾಮಲೀಲಾ ಮೈದಾನವನ್ನು ಪ್ರವೇಶಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳ ಪ್ರತಿಭಟನೆಗಳು ಬಹುಬೇಗನೆ ಹಿಂಸಾಚಾರಕ್ಕೆ ಬಲಿಯಾಗುತ್ತವೆ. ಆದರೆ, ಹಜಾರೆ ಬೆಂಬಲಿಗರು ಧಾರ್ಮಿಕ ಭಾವನೆಗಳನ್ನು ಹೊಂದಿರುವುದರಿಂದ ಇಲ್ಲಿಯವರೆಗೆ ಯಾವುದೇ ಹಿಂಸಾಚಾರ ಘಟನೆಗಳು ವರದಿಯಾಗಿಲ್ಲ.
ಆಮರಣ ನಿರಶನದ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಹಿಂಸಾಚಾರ, ಸಮಾಜವಿರೋಧಿ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಬೆಂಬಲಿಗರಿಗೆ ಕೋರಲಾಗಿದೆ ಎಂದು ಹೇಳಿದ್ದಾರೆ.
ಹವಾಮಾನ ಇಲಾಖೆಯ ಪ್ರಕಾರ, ನವದೆಹಲಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಗಳಿರುವುದರಿಂದ ನಿರಶನಕ್ಕೆ ಅಡ್ಡಿಯಾಗುವ ಆತಂಕ ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.