ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಸರಕಾರ ನಿರ್ಲಕ್ಷಿಸಿದಲ್ಲಿ ಮುಂಬರುವ ದಿನಗಳಲ್ಲಿ 'ಭಾರಿ ಬೆಲೆ'ಯನ್ನು ತೆರಬೇಕಾಗುತ್ತದೆ ಎಂದು ಲೋಕಪಾಲ ಕರಡು ಸಮಿತಿ ಸದಸ್ಯ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಸೂಕ್ಷ್ಮಮತಿಯನ್ನು ಹೊಂದಿರುವ ಯಾವುದೇ ಸರಕಾರ, ಜನತೆಯ ಭಾವನೆಗಳಿಗೆ ಸ್ಪಂದಿಸುತ್ತದೆ ಎಂದು ತಿಳಿಸಿದ್ದಾರೆ.
1977ರಲ್ಲಿ ತುರ್ತುಸ್ಥಿತಿ ಹೇರಿದ ನಂತರ ಕೇಂದ್ರದಲ್ಲಿದ್ದ ಸರಕಾರ ಅಧಿಕಾರದಿಂದ ಕೆಳಗಿಳಿಯಿತು ಎನ್ನುವುದನ್ನು ರಾಜಕಾರಣಿಗಳು ಮರೆಯುವಂತಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸಂಸತ್ತು ಮಾತ್ರ ಕಾನೂನು ಜಾರಿಗೊಳಿಸುವ ಏಕೈಕ ಸಂಸ್ಥೆ ಎನ್ನುವ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ, ಯಾವುದೇ ಕಾನೂನು ಸಂಸತ್ತಿನಲ್ಲಿ ಬಹುಮತದಿಂದ ಜಾರಿಗೊಳಿಸಲಾಗುತ್ತದೆ ಎಂದು ವ್ಯಂಗ್ಯವಾಡಿದರು.
ಯಾವುದೇ ಮೈದಾನದಲ್ಲಿ ಅಥವಾ ಸತ್ಯಾಗ್ರಹದ ಮೂಲಕ ಕಾನೂನು ಜಾರಿಯಾಗುವುದಿಲ್ಲ. ಅಣ್ಣಾ ಹಜಾರೆ ತಂಡದವರು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎನ್ನುವ ಪ್ರಧಾನಿ ಹೇಳಿಕೆಗೆ ಉತ್ತರಿಸಿದ ಹೆಗ್ಡೆ, ನಾವು ಕಾನೂನು ಜಾರಿ ಮಾಡುತ್ತಿಲ್ಲ. ಕೇವಲ ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಮಾಜ ಸುಧಾರಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರುದ್ಧದ ಹೋರಾಟ, ಖಾಸಗಿ ಉದ್ದೇಶವನ್ನು ಹೊಂದಿಲ್ಲ. ಸಾರ್ವಜನಿಕರ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿರುವುದನ್ನು ಸರಕಾರ ಅರ್ಥಮಾಡಿಕೊಳ್ಳಬೇಕು ಎಂದರು.