ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಮಲೀಲಾ ಮೈದಾನದಲ್ಲಿ ಕುಡಿಯುವ ನೀರು, ಶೌಚಾಲಯ ಸಮಸ್ಯೆ (Anna Hazare | Ramlila | Lack of facilities | Water and sanitation)
ರಾಮಲೀಲಾ ಮೈದಾನದಲ್ಲಿ ಕುಡಿಯುವ ನೀರು, ಶೌಚಾಲಯ ಸಮಸ್ಯೆ
ನವದೆಹಲಿ, ಭಾನುವಾರ, 21 ಆಗಸ್ಟ್ 2011( 08:49 IST )
ಅಣ್ಣಾ ಹಜಾರೆ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ನಿರಶನದಲ್ಲಿ ಪಾಲ್ಗೊಂಡಿರುವ ಸಾವಿರಾರು ಮಂದಿ ಸಾರ್ವಜನಿಕರು ಊಟ, ಕುಡಿಯುವ ನೀರು ಹಾಗೂ ಶೌಚಾಲಯಗಳ ಸಮರ್ಪಕ ವ್ಯವಸ್ಥೆಯಿಲ್ಲದೇ ಪರದಾಡುತ್ತಿದ್ದಾರೆ.
ಪ್ರತಿಭಟನೆಯು ಎರಡು ವಾರಕ್ಕೂ ಹೆಚ್ಚು ಕಾಲ ನಡೆಯುವ ನಿರೀಕ್ಷೆ ಇರುವುದರಿಂದ, ಅಲ್ಲಿ ಶುದ್ಧ ಕುಡಿಯವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಚಿಕಿತ್ಸಾ ಸೌಲಭ್ಯ ಶೀಘ್ರದಲ್ಲೇ ಕಲ್ಪಿಸಲಾಗುತ್ತದೆ ಎಂದು ಪ್ರತಿಭಟನಾಕಾರರು ನಿರೀಕ್ಷಿಸುತ್ತಿದ್ದಾರೆ.
ಅಣ್ಣಾ ಹಜಾರೆ ಹಾಗೂ ಪೊಲೀಸರ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ, ಸಂಘಟಕರು ಪ್ರತಿಭಟನಾಕಾರರಿಗೆ ಶುದ್ಧ ಕುಡಿಯುವ ನೀರು, ಸಂಚಾರಿ ಶೌಚಾಲಯ ಹಾಗೂ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು.
ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಶೌಚಾಲಯಗಳು ದುಸ್ಥಿತಿಯಲ್ಲಿವೆ. ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ಹೊರಗಿನ ಊರುಗಳಿಂದ ಬಂದಿರುವ ಮಹಿಳೆಯರು ಶೌಚಾಲಯ ಕೊರತೆಯಿಂದ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದಿಂದ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ವಿಷ್ಣುದತ್ ಶರ್ಮಾ ಅವರು ಕಳೆದ ಮೂರು ದಿನಗಳಿಂದ ನೀರು ಮತ್ತು ಆಹಾರವಿಲ್ಲದೇ ತೀವ್ರವಾಗಿ ಅಸ್ವಸ್ಥರಾಗಿದ್ದು, ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆಯುಂಟಾಗಿದೆ ಎಂದು ಸ್ಥಳದಲ್ಲಿದ್ದ ವೈದ್ಯರೊಬ್ಬರು ತಿಳಿಸಿದ್ದಾರೆ.
ಈ ಸ್ಥಳದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಹಾಗೂ ಪ್ರತಿಭಟನಾಕಾರರು ನೀರಿನ ಬಾಟಲಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗದೇ ಇರುವುದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನಾಕಾರರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಘಟನೆಯ ಕೆಲವು ವೈದ್ಯರು ದಿನದ 24 ಗಂಟೆಗಳ ಕಾಲ ತುರ್ತು ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಐಎಂಎ ಸಂಘಟನೆಯ ಡಾ. ಎ.ಪಿ.ಸಿಂಗ್, ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳುವವರಿಗೆ ಚಿಕಿತ್ಸೆ ನೀಡುವ ಮೂಲಕ ಹೋರಾಟಕ್ಕೆ ನಮ್ಮ ಸಹಾಯ ನೀಡುತ್ತಿದ್ದೇವೆ ಎಂದು ಹೇಳಿದರು.
ನಾವು ಪ್ರತಿಭಟನಾಕಾರರಿಗೆ ನಮ್ಮ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಔಷಧ ವಿತರಿಸುತ್ತಿದ್ದೇವೆ. ಅಣ್ಣಾ ಅವರ ಹೋರಾಟವನ್ನು ಬೆಂಬಲಿಸಿ ದೇಶದ ವಿವಿಧೆಡೆಗಳಿಂದ ಆಗಮಿಸಿದ ಬಡಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಡಾ. ಸಚಿನ್ ಭಾರ್ಗವ್ ತಿಳಿಸಿದ್ದಾರೆ.
ಅತಿಸಾರ, ಗ್ಯಾಸ್ಟ್ರಿಕ್ ಹಾಗೂ ಜ್ವರದಿಂದ ಬಳಲುತ್ತಿದ್ದ ಸುಮಾರು 400 ಜನರಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿರುವ 10 ಜನರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸರಕಾರವು ನೀರು, ಔಷಧ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಏಕೆಂದರೆ ಆದಷ್ಟು ಬೇಗ ಜನರನ್ನು ಇಲ್ಲಿಂದ ಕಳುಹಿಸುವುದು ಅದರ ಉದ್ದೇಶವಾಗಿದೆ. ಆದಾಗ್ಯೂ ಹಜಾರೆ ಅವರ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ ಎಂದು ನರ್ಸ್ ಅಮೀನಾ ಖಾನ್ ಆಪಾದಿಸಿದ್ದಾರೆ.