ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಬಂಧನ: ಯುಪಿಎ ಮೈತ್ರಿಕೂಟದಲ್ಲಿ ಭಿನ್ನಮತ (NCP slams govt | Anna Hazare | Anna's arrest | Congress | Lokpal Bill)
ಅಣ್ಣಾ ಬಂಧನ: ಯುಪಿಎ ಮೈತ್ರಿಕೂಟದಲ್ಲಿ ಭಿನ್ನಮತ
ನವದೆಹಲಿ, ಭಾನುವಾರ, 21 ಆಗಸ್ಟ್ 2011( 08:50 IST )
ಗಾಂಧಿವಾದಿ ಅಣ್ಣಾ ಹಜಾರೆಯವರನ್ನು ಬಂಧಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಮಿತ್ರಪಕ್ಷವಾದ ಎನ್‌ಸಿಪಿ ತರಾಟೆಗೆ ತೆಗೆದುಕೊಂಡಿದೆ.
ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕಾಂಗ್ರೆಸ್ ಪಕ್ಷ ಎಡವಿದೆ. ಸರಕಾರ ಹಜಾರೆಯವರನ್ನು ಬಂಧಿಸಿದ ಕ್ರಮ ಸೂಕ್ತವಲ್ಲ. ನಾಗರಿಕ ಸಮಿತಿಯೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂದು ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ಡಿಪಿ ತ್ರಿಪಾಠಿ ಕಿಡಿಕಾರಿದ್ದಾರೆ.
ಸಮಾಜ ಸುಧಾರಕ ಹಜಾರೆಯವರನ್ನು ಬಂಧಿಸುವ ಮುನ್ನ ಕಾಂಗ್ರೆಸ್ ಪಕ್ಷ ಮಿತ್ರಪಕ್ಷಗಳನ್ನು ಸಂಪರ್ಕಿಸಬೇಕಾಗಿತ್ತು. ಒಂದು ವೇಳೆ ಮಿತ್ರ ಪಕ್ಷಗಳನ್ನು ಸಂಪರ್ಕಿಸಿದ್ದಲ್ಲಿ ಇಂತಹ ತಪ್ಪುಗಳು ನಡೆಯುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರುದ್ಧದ ಹೋರಾಟ ಸರಿಯಾಗಿದೆ. ಆದರೆ, ಪ್ರತಿಭಟಿಸುತ್ತಿರುವ ರೀತಿ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ. ಸಂಸತ್ತಿನಲ್ಲಿ ಲೋಕಪಾಲ ಮಸೂದೆಯ ಬಗ್ಗೆ ಚರ್ಚಿಸುತ್ತಿರುವಾಗ ಹಜಾರೆ ಆಮರಣ ನಿರಶನ ಆರಂಭಿಸಿರುವುದು ಸೂಕ್ತ ನಿರ್ಧಾರವಲ್ಲ ಎಂದು ಎನ್‌ಸಿಪಿ ನಾಯಕ ತ್ರಿಪಾಠಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂಸದ ಸಂದೀಪ್ ದೀಕ್ಷಿತ್ ಕೂಡಾ, ಅಣ್ಣಾ ಹಜಾರೆಯವರನ್ನು ಬಂಧಿಸಿರುವುದು ಸೂಕ್ತವಲ್ಲ ಎಂದು ಸರಕಾರದ ವಿರುದ್ಧ ಅಪಸ್ವರ ಎತ್ತಿರುವುದು ಯುಪಿಎ ಮಿತ್ರಕೂಟದಲ್ಲಿ ಭಿನ್ನಮತದ ಹೊಗೆ ಕಂಡುಬರುತ್ತಿದೆ ಎಂದು ಮೂಲಗಳು ತಿಳಿಸಿವೆ.