ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾಜಿ ರಾಷ್ಟ್ರಪತಿ ಅಥವಾ ಪ್ರಧಾನಿ ಹುದ್ದೆ ಬಯಸುತ್ತಿಲ್ಲ: ಹೆಗ್ಡೆ (Santosh Hegde | Jan Lokpal Bill | Anna Hazare | Corruption)
ಅಣ್ಣಾಜಿ ರಾಷ್ಟ್ರಪತಿ ಅಥವಾ ಪ್ರಧಾನಿ ಹುದ್ದೆ ಬಯಸುತ್ತಿಲ್ಲ: ಹೆಗ್ಡೆ
ನವದೆಹಲಿ, ಭಾನುವಾರ, 21 ಆಗಸ್ಟ್ 2011( 18:10 IST )
ಭ್ರಷ್ಟಾಚಾರ ವಿರುದ್ಧದ ಗಾಂಧಿವಾದಿ ಅಣ್ಣಾ ಹಜಾರೆ ಹೋರಾಟಕ್ಕೆ ತಮ್ಮ ಬೆಂಬಲ ನಿರಂತರ ಎಂದು ಹೇಳಿರುವ ಮಾಜಿ ಲೋಕಾಯುಕ್ತ ನ್ಯಾಯವಾದಿ ಸಂತೋಷ್ ಹೆಗ್ಡೆ, ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಲ್ಲ ಎಂದು ಘೋಷಿಸಿದ್ದಾರೆ.
ಕಳೆದ ಐದು ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಕ್ಕೆ ನೇತೃತ್ವ ನೀಡಿದ್ದ ಹೆಗ್ಡೆ ಅವರು ಭಾನುವಾರ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ನಿರತರಾಗಿರುವ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ ಹೆಗ್ಡೆ ಅವರು, ಜನಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಸರಕಾರ ಮಣಿಯುವವರೆಗೂ ಜನರ ಬೆಂಬಲ ಅಣ್ಣಾ ಜತೆಗಿರಲಿದೆ ಎಂದರು.
ಅಣ್ಣಾಜಿ ಯಾವುದೇ ಪ್ರಧಾನ ಮಂತ್ರಿ ಅಥವಾ ರಾಷ್ಟ್ರಪತಿ ಹುದ್ದೆಯನ್ನು ಬಯಸುತ್ತಿಲ್ಲ. ಬದಲಾಗಿ ಭ್ರಷ್ಟಚಾರ ವಿರುದ್ಧ ಸಶಕ್ತ ಕಾನೂನು ನಿರ್ಮಾಣಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದರು.
ಎಷ್ಟೇ ದಿನವಾದರೂ ನಾವೆಲ್ಲ ಅಣ್ಣಾ ಜತೆಗಿರಲಿದ್ದೇವೆ ಎಂಬ ವಿಚಾರದಲ್ಲಿ ನಮಗೆಲ್ಲ ಅಚಲ ವಿಶ್ವಾಸವಿದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಅಣ್ಣಾ ಜತೆಗಿದ್ದೇವೆ ಎಂದು ಸುಪ್ರೀಂ ಕೋರ್ಟ್ ಮಾಜಿ ಜಡ್ಜ್ ಆಗಿರುವ ಹೆಗ್ಡೆ ತಿಳಿಸಿದರು.
ಜನರಿಗೆ ಸರ್ವೋಚ್ಚ ಸ್ಥಾನ ಎಂದು ನಮ್ಮ ನಾಯಕರು ಹೇಳುತ್ತಲೇ ಇದ್ದಾರೆ. ಆದರೆ ನಿಜ ಸಂಗತಿ ಏನೆಂದರೆ ಸಾಮಾನ್ಯ ಜನತೆಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಕಳೆದ 42 ವರ್ಷಗಳಿಂದ ಮಸೂದೆ ಜಾರಿಗಾಗಿ ಕಾಯುತ್ತಿದ್ದೇವೆ. ಆದರೆ ಎಲ್ಲ ಪ್ರಕಾರದ ಸರಕಾರದಿಂದಲೂ ವಂಚನೆ ಎದುರಿಸಿದ್ದೇವೆ ಎಂದರು.
ಕರ್ನಾಟಕದ ಜನತೆ ಅಣ್ಣಾ ಜತೆಗಿದ್ದಾರೆ ಎಂಬುದನ್ನು ಮತ್ತೊಮ್ಮೆ ಹೆಗ್ಡೆ ಸಾರಿದರು. ಕರ್ನಾಟಕದಲ್ಲಿ 35ಕ್ಕೂ ಹೆಚ್ಚು ಮಂದಿ ನಿರಶನ ನಿರತರಾಗಿದ್ದಾರೆ. ಜನಲೋಕಪಾಲ ಮಸೂದೆಗಾಗಿ ಇಡೀ ದೇಶ ಕಾಯುತ್ತಿದೆ. ಬೇಡಿಕೆ ಈಡೇರಿರುವರಗೊ ಹೋರಾಟ ನಿಲ್ಲಲ್ಲ ಎಂದರು.
ಇದೇ ಸಂದರ್ಭದಲ್ಲಿ ನಾಗರಿಕ ಸಮಿತಿಯಲ್ಲಿ ಯಾವುದೇ ಭಿನ್ನಮತವಿಲ್ಲ ಎಂಬುದನ್ನು ಹೆಗ್ಡೆ ಸ್ಪಷ್ಟಪಡಿಸಿದರು. ಈ ಹಿಂದೆ ನಾನು ಒಂದು ವಿಚಾರವನ್ನು ಸರಕಾರಕ್ಕೆ ಹೇಳಿದ್ದೆ. ಒಂದು ವೇಳೆ ಸರಕಾರ ನನ್ನ ಮಾತನ್ನು ಒಪ್ಪಿದ್ರೆ ನಾಗರಿಕ ಸಮಿತಿ ಜತೆ ನಾನು ಚರ್ಚಿಸುತ್ತಿದ್ದೆ. ನಾಗರಿಕ ಸಮಿತಿಯಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ. ಕೆಲವೊಂದು ಬಾರಿ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವಿಲ್ಲಿ ನಿರಶನ ಮಾಡುವ ಪ್ರಯತ್ನವಲ್ಲ. ಬದಲಾಗಿ ಒಳ್ಳೆಯ ಜನಲೋಕಪಾಲ ಮಸೂದೆ ಜಾರಿಗೆ ಬರಬೇಕು ಎಂದು ಸೇರಿಸಿದರು.