ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 3 ಷರತ್ತುಗಳಿಗೆ ಒಪ್ಪಿದ್ರೆ ಉಪವಾಸ ಅಂತ್ಯ: ಅಣ್ಣಾ ಹಜಾರೆ (Lokpal Bill | Anna Hazare | Jan Lokpal Bill | Manmohan Singh | Government)
3 ಷರತ್ತುಗಳಿಗೆ ಒಪ್ಪಿದ್ರೆ ಉಪವಾಸ ಅಂತ್ಯ: ಅಣ್ಣಾ ಹಜಾರೆ
ನವದೆಹಲಿ, ಗುರುವಾರ, 25 ಆಗಸ್ಟ್ 2011( 18:35 IST )
PTI
ಸಶಕ್ತ ಲೋಕಪಾಲ ಮಸೂದೆಯ ಬೇಡಿಕೆ ಈಡೇರುವವರಿಗೆ ಮತ್ತು ನಮ್ಮ 3 ಷರತ್ತುಗಳಿಗೆ ಸರಕಾರ ಒಪ್ಪುವವರೆಗೂ ನಿರಶನ ಅಂತ್ಯಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು 10 ದಿನಗಳಿಂದ ಉಪವಾಸ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.
ನನ್ನ ಪ್ರತಿಕ್ರಿಯೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರವಾನಿಸಿದ್ದೇನೆ ಎಂದು ಅಣ್ಣಾ ಹಜಾರೆ ತಿಳಿಸಿದ್ದಾರೆ.
74 ವರ್ಷ ವಯಸ್ಸಿನ ಗಾಂಧಿವಾದಿ ಅಣ್ಣಾ ಹಜಾರೆ, ಸಂಸತ್ತಿನಲ್ಲಿ ಜನಲೋಕಪಾಲ ಮಸೂದೆ ಚರ್ಚೆ, ತಳಮಟ್ಟದ ಅಧಿಕಾರಿಗಳನ್ನು ಲೋಕಪಾಲ ವ್ಯಾಪ್ತಿಗೊಳಪಡಿಸಿ ಮತ್ತು ಎಲ್ಲಾ ರಾಜ್ಯಗಳಲ್ಲಿ ಲೋಕಪಾಲರಷ್ಟೆ ಸ್ವಾತಂತ್ರ್ಯವುಳ್ಳ ಲೋಕಾಯುಕ್ತರನ್ನು ನೇಮಕ ಮಾಡಿ ಹಾಗೂ ನಾಗರಿಕರ ಸನ್ನದು ರೂಪಿಸಿ ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಹತ್ತು ದಿನಗಳ ಉಪವಾಸದಿಂದ ಬಳಲಿ ನಿಶ್ಶಕ್ತರಾದಂತೆ ಕಂಡುಬಂದರೂ, ರಾಮಲೀಲಾ ಮೈದಾನದಲ್ಲಿ ಅದ್ಭುತ ಶಕ್ತಿಯಿಂದ ಮಾತನಾಡಿದ ಅಣ್ಣಾ, ಸರಕಾರ ತಮಗೆ ಬಲವಂತವಾಗಿ ಡ್ರಿಪ್ಸ್ ನೀಡಿ ಉಪವಾಸ ಹತ್ತಿಕ್ಕಲು ನೋಡಿದರೂ ಹೆದರುವುದಿಲ್ಲ. ಈ ದೇಹದಲ್ಲಿ ಪ್ರಾಣ ಇರುವವರೆಗೂ ದೇಶಕ್ಕಾಗಿ, ದೇಶದ ಭವಿಷ್ಯದ ಪೀಳಿಗೆಗಾಗಿ ಹೋರಾಟ ಮಾಡಲು ಸಿದ್ಧ ಎಂದೂ ಘೋಷಿಸಿದ್ದಾರೆ.
ಅವರು ಗುರುವಾರ ರಾಮಲೀಲಾ ಮೈದಾನದಲ್ಲಿ ಮಾಡಿದ ಅಬ್ಬರದ ಭಾಷಣದ ಮುಖ್ಯಾಂಶಗಳು: * ದೇಶದ ಬೆನ್ನೆಲುಬಾಗಿರುವ ರೈತರು ಸಾಯುತ್ತಿದ್ದಾರೆ. ಬಡವರಿಗೆ ಬದುಕಲು ಕಷ್ಟವಾಗುತ್ತಿದೆ. ಕೆಲವರು ತಿನ್ನಲು ಬದುಕುತ್ತಿದ್ದಾರೆ, ಇನ್ನು ಕೆಲವರು ಬದುಕಲು ತಿನ್ನುವಂತಾಗಿದೆ.
* ಅಣ್ಣಾ ಇರಲಿ, ಇಲ್ಲದಿರಲಿ. ಈ ಹೋರಾಟ ಮುಂದುವರಿಯಬೇಕು. ಶರೀರದಲ್ಲಿ ಪ್ರಾಣವಿರುವವರೆಗೂ ನಿರಶನ ಮಾಡುತ್ತೇನೆ, ಹಿಂದೆ ಸರಿಯುವುದಿಲ್ಲ.
* ನಮ್ಮ ಹೋರಾಟವನ್ನು ಸಂಸದರು ಶ್ಲಾಘಿಸಿದ್ದನ್ನು ಕೇಳಿದೆ. ಅವರಿಗೆ ಧನ್ಯವಾದ. ಆದರೆ, ಅವರು ಹೊಗಳಿ ಅಟ್ಟಕ್ಕೇರಿಸಿ, ಅಡಿಯಿಂದ ಇಲಿ ಬಿಡುತ್ತಾರೆ. ನಾವೆಲ್ಲರೂ ಅವರ ಬಗ್ಗೆ ಎಚ್ಚರಿಕೆಯಿಂದಿರಬೇಕು.
* ನಾನು ಈ ಹೋರಾಟ ಮಾಡುವುದು ನನಗಾಗಿ ಅಲ್ಲ. ಅಣ್ಣಾ ಹಜಾರೆ ಮಂದಿರದಲ್ಲಿ ಮಲಗುತ್ತಾರೆ, ಊಟಕ್ಕೊಂದು ತಟ್ಟೆಯಿದೆ ಅಷ್ಟೇ.
* ನನ್ನ ಆರೋಗ್ಯದ ಬಗ್ಗೆ ಪ್ರಧಾನಿಗೆ ಚಿಂತೆಯಿದೆ ಎಂದಿದ್ದಾರೆ. ಆದರೆ, ಈ 10 ದಿನಗಳ ಕಾಲ ಏನಾಗಿತ್ತು ಅಂತ ನಾನು ವಿಲಾಸ್ ರಾವ್ ದೇಶಮುಖ್ ಮೂಲಕ ಪ್ರಧಾನಿಯವರಲ್ಲಿ ಪ್ರಶ್ನಿಸಿದ್ದೇನೆ.
* ಪ್ರಧಾನಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ, ಇಷ್ಟು ತಿಂಗಳ ಕಾಲ ನಾವು ಪ್ರತಿಭಟನೆ ನಡೆಸುತ್ತಿದ್ದಾಗ ಅವರೇನು ಮಾಡುತ್ತಿದ್ದರು?
* ಏರ್ ಕಂಡಿಶನಿಂಗ್ ಒಳಗೆ ಕುಳಿತಿರುವವರು ಅಧಿಕಾರವು ತಮ್ಮ ಕೈ ತಪ್ಪಿ ಹೋಗುತ್ತಿರುವವರ ಬಗ್ಗೆ ಚಿಂತಿತರಾಗಿದ್ದಾರೆ.
* ಸರಕಾರವು ಸೇವಕ ಮತ್ತು ಜನತೆಯೇ ಪ್ರಭು. ನನ್ನ 3 ವಿಷಯಗಳ (ಕೆಳ ಮಟ್ಟದ ಸರಕಾರಿ ನೌಕರರೂ ಲೋಕಪಾಲ ವ್ಯಾಪ್ತಿಗೆ ಬರಬೇಕು, ಸಂಸತ್ತಿನಲ್ಲಿ ನಾಗರಿಕ ಸನದು ಚರ್ಚೆಯಾಗಬೇಕು ಮತ್ತು ಎಲ್ಲ ರಾಜ್ಯಗಳಲ್ಲಿಯೂ ಲೋಕಪಾಲರಷ್ಟೇ ಸ್ವಾತಂತ್ರ್ಯ ಹೊಂದಿರುವ ಲೋಕಾಯುಕ್ತರನ್ನು ನೇಮಿಸಬೇಕು) ಕುರಿತು ಅವರು ಸಂಸತ್ತಿನಲ್ಲಿ ಚರ್ಚೆ ಆರಂಭಿಸಲಿ, ನಾನು ಉಪವಾಸ ಕೊನೆಗೊಳಿಸುತ್ತೇನೆ.
* ಪ್ರಧಾನಿಯವರ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ್ದೇನೆ. ಆದರೆ ಈ ವಿಷಯದಲ್ಲಿ ಪ್ರಮುಖ ಪ್ರತಿಪಕ್ಷಗಳೇಕೆ ಮೌನ ತಾಳಿವೆ?
* ಪ್ರಜೆಯೇ ಪ್ರಭು ಆಗಿದ್ದರೆ, ಕೆಳಹಂತದ ಸರಕಾರಿ ನೌಕರರ ಬಳಿಗೆ ಜನರೇಕೆ ತಮ್ಮ ಕೆಲಸಕ್ಕಾಗಿ ಇಷ್ಟೊಂದು ಅಲೆದಾಡಬೇಕು? ಪ್ರತೀ ಹಂತದಲ್ಲಿಯೂ ಹಣ ನೀಡುವಂತಾಗಬೇಕು?
* ಪ್ರತಿಯೊಬ್ಬ ಪ್ರಜೆಯೂ ಅವರವರ ಹಕ್ಕುಗಳನ್ನು ತಮ್ಮ ಮನೆಯಲ್ಲೇ ಕುಳಿತು ಕಂಪ್ಯೂಟರುಗಳಲ್ಲಿ, ಎಸ್ಎಂಎಸ್‌ಗಳ ಮೂಲಕ ತಿಳಿದುಕೊಳ್ಳುವಂತಾಗಲಿ.
* ಭ್ರಷ್ಟ ಅಧಿಕಾರಿಗಳನ್ನು ಜೈಲಿಗೆ ಅಟ್ಟಿ, ಅವರ ಆಸ್ತಿಪಾಸ್ತಿಯನ್ನೆಲ್ಲಾ ಮುಟ್ಟುಗೋಲು ಹಾಕಿಕೊಳ್ಳಬೇಕು.
* ಈ ಹಿಂದೆ ಎರಡು ಬಾರಿಯೂ ಸರಕಾರವು ಮಾತಿಗೆ ತಪ್ಪಿದೆ. ಈ ಬಾರಿ ನಮಗೆ ವಿಶ್ವಾಸದ್ರೋಹ ಮಾಡಲು ನಾನು ಬಿಡುವುದಿಲ್ಲ. ಸತ್ತರೂ ಕೂಡ ನನ್ನ ಈ ಮೂರು ಬೇಡಿಕೆಗಳನ್ನು ಬಿಡಲಾರೆ.
* ನಮ್ಮ ಭೂಷಣ್ ಅವರ ಮೇಲೆ, ಹೆಗ್ಡೆಯವರ ಮೇಲೆ, ನನ್ನ ಮೇಲೂ ಕೆಸರು ಎರಚಲು ಪ್ರಯತ್ನಿಸಿದರು. ನಮಗೆ ಹಣ ಎಲ್ಲಿಂದ ಬರುತ್ತಿದೆ, ಆಸ್ತಿಯೆಲ್ಲಿಂದ ಎಂಬಿತ್ಯಾದಿಗಳನ್ನೆಲ್ಲಾ ತನಿಖೆ ನಡೆಸಲಾಯಿತು. ಈ ಸರಕಾರ ಮಾಡಿದ್ದು ಇಷ್ಟೇ.
* ನಮಗೆ ಸೆಪ್ಟೆಂಬರ್ 3ರವರೆಗೆ ಇಲ್ಲಿ ಸತ್ಯಾಗ್ರಹ ನಡೆಸಲು ಅವಕಾಶವಿದೆ. ಬೇಕಿದ್ದರೆ, ಗಡುವು ವಿಸ್ತರಣೆಗೆ ಮನವಿ ಮಾಡಿಕೊಳ್ಳುತ್ತೇವೆ.
* ನಮ್ಮದು ಅಹಿಂಸಾ ಹೋರಾಟ. ಯಾರು ಕೂಡ ಹಿಂಸಾಚಾರದಲ್ಲಿ ತೊಡಗಬೇಡಿ. ಏನಾದರೂ ಹಿಂಸಾಚಾರದಲ್ಲಿ ತೊಡಗಿದರೆ ಅವರು ನಿಮ್ಮನ್ನು ಚಚ್ಚಿ ಹಾಕುತ್ತಾರೆ. ಹೀಗಾಗಿ ಅಹಿಂಸೆಯೇ ಪರಮ ಮಂತ್ರ.
* (ಒಳ್ಳೆಯ ಕಾರಣಕ್ಕಾಗಿ) ಜೈಲಿಗೆ ಹೋಗುವುದೆಂದರೆ ಅವಮಾನ ಅಲ್ಲ. ಅದು ಹೆಮ್ಮೆ. ಅಲ್ಲಿ ಆಹಾರ, ತಿಂಡಿ ಎಲ್ಲ ಸಿಗುತ್ತದೆ. ನಮ್ಮ ಹೋರಾಟ ಯಶಸ್ವಿಯಾಗುವವರೆಗೂ, ಬನ್ನಿ ಜೈಲುಗಳನ್ನು ತುಂಬೋಣ. ಎಲ್ಲರೂ ಜೈಲ್ ಭರೋ ಮಾಡಲೂ ಸಿದ್ಧರಾಗಿ.