ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ನಿರಶನದ ಬಗ್ಗೆ ಕೊನೆಗೂ ಬಾಯಿಬಿಟ್ಟ ಸೋನಿಯಾ ಪುತ್ರ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಾಹುಲ್ ಗಾಂಧಿ, ಲೋಕಪಾಲ ಒಂದರಿಂದಲೇ ಭ್ರಷ್ಟಾಚಾರ ನಿರ್ಮೂಲನೇ ಆಸಾಧ್ಯ. ಚುನಾವಣಾ ಆಯೋಗದಂತೆ ಲೋಕಪಾಲ ಸಂವಿಧಾನಿಕ ಸಂಸ್ಥೆಯಾಗಲಿ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಜಾರೆ ನಿಲುವನ್ನು ಸಂಸತ್ತಿನಲ್ಲಿ ಶ್ಲಾಘಿಸಿದ ರಾಹುಲ್, ಕೇವಲ ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ನಿಗ್ರಹ ಸಾಧ್ಯವಾಗುತ್ತದೆ ಎನ್ನುವ ಹಜಾರೆ ನಿಲುವನ್ನು ತಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭ್ರಷ್ಟಾಚಾರ ನಿರ್ಮೂಲನೆಗೆ ಸರಳ ಪರಿಹಾರಗಳಿಲ್ಲ. ಆದ್ದರಿಂದ, ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರಬಲ ರಾಜಕೀಯ ಇಚ್ಚಾಶಕ್ತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ, ರಾಜಕೀಯ ಪಕ್ಷಗಳು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸಂಸತ್‌ನಿಂದ ಹೊರಬಂದ ರಾಹುಲ್ ಗಾಂಧಿಯವರನ್ನು ಪತ್ರಕರ್ತರು, ಇಲ್ಲಿಯವರೆಗೆ ತಾವು ಹಜಾರೆ ನಿರಶನದ ಬಗ್ಗೆ ಮಾತನಾಡದಿರುವ ಕಾರಣವೇನು?ಎಂದು ಪ್ರಶ್ನಿಸಿದಾಗ, ಯಾವುದೇ ಮಾತನಾಡುವ ಮುನ್ನ ಯೋಚಿಸಬೇಕು ಎನ್ನುವ ತತ್ವವನ್ನು ಪಾಲಿಸುವುದಾಗಿ ಹೇಳಿದರು.
ರಾಹುಲ್ ಗಾಂಧಿಯವರ ಮೂಲಕ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಲು ಹೆಣಗಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಹೆಗ್ಡೆ, ಕಿರಣ್ ಬೇಡಿ ಪ್ರತಿಕ್ರಿಯೆ
ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಚುನಾವಣಾ ಆಯೋಗದಂತೆ ಲೋಕಪಾಲ ಸಂವಿಧಾನಕ ಸಂಸ್ಥೆಯಾಗಬೇಕು ಎನ್ನುವ ರಾಹುಲ್ ಗಾಂಧಿ ಹೇಳಿಕೆಯನ್ನು ನೋಡಿದಲ್ಲಿ ದೀರ್ಘಾವಧಿಯ ಪಂಚವಾರ್ಷಿಕ ಯೋಜನೆಯಂತಿದೆ ಎಂದು ಟೀಕಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ಹಾಗೂ ಅಣ್ಣಾ ತಂಡದ ಸದಸ್ಯೆ ಕಿರಣ್ ಬೇಡಿ ಟ್ವಿಟ್ಟರ್‌ನಲ್ಲಿ ಸಂದೇಶವನ್ನು ದಾಖಲಿಸಿದ್ದು, ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಪಾಲ ಮಸೂದೆ ಪರಿಪೂರ್ಣವಲ್ಲ ಎನ್ನುವುದು ನಮಗೆ ಗೊತ್ತಿದೆ. ಆದರೆ, ಮೌಂಟ್ ಎವರೇಸ್ಟ್ ತುದಿಯನ್ನು ತಲುಪುವ ಮುನ್ನ, ಬೆಟ್ಟಗಳನ್ನು ಹತ್ತುವುದರಿಂದಲೇ ಪರ್ವತಾರೋಹಣ ಆರಂಭಿಸಬೇಕಾಗುತ್ತದೆ ಎನ್ನುವುದು ಮರೆಯಬಾರದು ಎಂದು ಕುಟುಕಿದ್ದಾರೆ.