ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ಜಯ-ಇದು ದೇಶದ ಐತಿಹಾಸಿಕ ಕ್ಷಣ: ಕೇಜ್ರಿವಾಲ್ (Arvind Kejriwal | Parliament | Manmohan Singh | Anna Hazare | Lokpal Bill)
ಲೋಕಪಾಲ ಜಯ-ಇದು ದೇಶದ ಐತಿಹಾಸಿಕ ಕ್ಷಣ: ಕೇಜ್ರಿವಾಲ್
ನವದೆಹಲಿ, ಭಾನುವಾರ, 28 ಆಗಸ್ಟ್ 2011( 12:25 IST )
'ಆಕ್ರೋಶದಿಂದಲೇ ಜನರು ಭ್ರಷ್ಟಾಚಾರದ ವಿರುದ್ಧದ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಜನಲೋಕಪಾಲ ಮಸೂದೆಗೆ ಉಭಯ ಸದನಗಳಲ್ಲಿ ನಿರ್ಣಯ ಅಂಗೀಕಾರಗೊಂಡಿರುವುದು ದೇಶದ ಐತಿಹಾಸಿಕ ಘಟನೆಯಾಗಿದೆ' ಎಂದು ನಾಗರಿಕ ಸಮಿತಿ ಸದಸ್ಯ ಅರವಿಂದ ಕೇಜ್ರಿವಾಲ್ ಬಣ್ಣಿಸಿದ್ದಾರೆ.
ಭಾನುವಾರ ರಾಮಲೀಲಾ ಮೈದಾನದಲ್ಲಿ ಕಳೆದ 288 ಗಂಟೆಗಳ ಕಾಲದಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವ ಮುನ್ನ ಮಾತನಾಡಿದ ಅವರು,ಪ್ರಧಾನಿ ಮನಮೋಹನ್ ಸಿಂಗ್, ಸಂಸದರು, ಅಣ್ಣಾ ಸೇವೆಗೆ ರಾಲೆಗಣ ಸಿದ್ಧಿಯಿಂದ ಆಗಮಿಸಿದ ತಂಡ, ಅಣ್ಣಾ ತಂಡದ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಜನರಿಗೆ ಹಾಗೂ ಸಂಸದರು ಸೇರಿದಂತೆ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಭ್ರಷ್ಟಾಚಾರ ತಡೆಗಾಗಿ ಪ್ರಬಲ ಜನಲೋಕಪಾಲ ಮಸೂದೆ ಜಾರಿಯಾಗಬೇಕೆಂದು ಹೋರಾಟ ನಡೆಸಿದ ಅಣ್ಣಾ ಹಜಾರೆಗೆ ತಾವು ಹಗಲು ರಾತ್ರಿ ಎನ್ನದೇ ಬೆಂಬಲ ನೀಡಿದ್ದೀರಿ. ಅದೇ ರೀತಿ ವಿದೇಶಗಳಲ್ಲಿಯೂ ಪ್ರತಿಭಟನೆ ಮೂಲಕ ಬೆಂಬಲಿಸಿದ ಭಾರತೀಯರಿಗೂ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು. ಇದು ಜನತೆಗೆ ಸಂದ ಜಯವಾಗಿದೆ ಎಂದರು.
ನಾವು ಯಾವುದೇ ರೀತಿಯಲ್ಲೂ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿಲ್ಲ. ಸಂವಿಧಾನಕ್ಕಿಂತ ಮೇಲೂ ಅಂತ ಭಾವಿಸಿಲ್ಲ. ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವವಿದೆ ಎಂದು ಕೇಜ್ರಿವಾಲ್ ಅಭಿಪ್ರಾಯವ್ಯಕ್ತಪಡಿಸಿದರು.
ಅಣ್ಣಾ ಹಜಾರೆ ಹೋರಾಟ ಜನತೆ ನೀಡಿದ ದೇಣಿಗೆಯಿಂದಲೇ ನಡೆದಿದೆ. ಇದರಲ್ಲಿ ಬೇರೆ ಯಾವುದೇ ತಪ್ಪು ಅರ್ಥ ಕಲ್ಪಿಸುವುದು ಬೇಡ. ಸಮಾಜದಲ್ಲಿ ಪರಿವರ್ತನೆಯ ಶಕೆ ಆರಂಭವಾಗಬೇಕು ಎಂಬ ದೃಷ್ಟಿಕೋನದಿಂದ ನಡೆಸಿದ ಹೋರಾಟಕ್ಕೆ ಜನಸಾಮಾನ್ಯರು ಬೆಂಬಲ ನೀಡಿದ್ದಾರೆ. ಹಾಗಾಗಿ ನಾವು ಅಧಿಕಾರ ಮೋಹದಿಂದಾಗಲಿ ಅಥವಾ ಇನ್ಯಾವುದೋ ದುರುದ್ದೇಶದಿಂದ ಈ ಹೋರಾಟ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.