ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆಗೆ ಮೋಸ: ಸ್ವಾಮಿ ಅಗ್ನಿವೇಶ್ ಡಬ್ಬಲ್‌ಗೇಮ್? (Anna Hazare | Swami Agnivesh | Kapil Sibal | Lokpal Bill | Kiran Bedi)
ಅಣ್ಣಾ ಹಜಾರೆಗೆ ಮೋಸ: ಸ್ವಾಮಿ ಅಗ್ನಿವೇಶ್ ಡಬ್ಬಲ್‌ಗೇಮ್?
ನವದೆಹಲಿ, ಸೋಮವಾರ, 29 ಆಗಸ್ಟ್ 2011( 09:22 IST )
ಭ್ರಷ್ಟಾಚಾರ ತಡೆಗಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಂಡದಲ್ಲಿದ್ದ ಪ್ರಮುಖ ಸದಸ್ಯ ಸ್ವಾಮಿ ಅಗ್ನಿವೇಶ್, ಭ್ರಷ್ಟಾಚಾರ ನಿಗ್ರಹದ ವಿರುದ್ಧದ ಹೋರಾಟವನ್ನು ಕಟುವಾಗಿ ಟೀಕಿಸಿದ್ದಲ್ಲದೇ, ಬೆನ್ನಿಗೆ ಚೂರಿ ಹಾಕಿದ್ದಾರೆ, ವಂಚಿಸಿದ್ದಾರೆ, ಅಲ್ಲದೇ ಆಡಳಿತಾರೂಢ ಯುಪಿಎ ಸರ್ಕಾರಕ್ಕೆ ಬಹುಪರಾಕ್ ಹೇಳಿ ಡಬ್ಬಲ್ ಗೇಮ್ ಎಸಗಿರುವ ಅಂಶ ಸಾಮಾಜಿಕ ಜಾಲ ತಾಣದಲ್ಲಿ ಬಟಾಬಯಲಾಗುವ ಮೂಲಕ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಸ್ವಾಮಿ ಅಗ್ನಿವೇಶ್ ಅವರು ಸಚಿವರೊಬ್ಬರ ಜತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿರುವ ವೀಡಿಯೋ ಟೇಪ್‌ವೊಂದು ಯೂಟ್ಯೂಬ್‌ನಲ್ಲಿ ಪ್ರಸಾರವಾಗಿದೆ. ಸ್ವಾಮಿ ಅಗ್ನಿವೇಶ್ ಅವರ ವಿರುದ್ಧ ಈ ಸಂಬಂಧ ಅಣ್ಣಾ ತಂಡ ಕಿಡಿಕಾರಿ ಉತ್ತರವನ್ನೂ ಕೇಳಿದೆ. ನೀವು ಯಾರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಲು ಹೇಳಿದೆ.
ಏನಿದು ಸ್ವಾಮಿ ಡಬ್ಬಲ್ ಗೇಮ್?: ಭ್ರಷ್ಟಾಚಾರ ತಡೆಗಾಗಿ ಪ್ರಬಲ ಜನಲೋಕಪಾಲ ಮಸೂದೆ ಜಾರಿಯಾಗಬೇಕೆಂದು ಆಗ್ರಹಿಸಿ ಅಣ್ಣಾ ಹಜಾರೆ 12 ದಿನಗಳ ಕಾಲ ನಡೆಸಿದ ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಸುಮಾರು 9 ದಿನಗಳ ಕಾಲ ಅಣ್ಣಾ ತಂಡದ ಜತೆ ಇದ್ದ ಸ್ವಾಮಿ ಅಗ್ನಿವೇಶ್ ಉಲ್ಟಾ ಹೊಡೆದಿದ್ದರು. ಅಲ್ಲದೇ ನಿರೀಕ್ಷೆಯಂತೆ ತಮ್ಮ ದ್ವಿಮುಖ ನೀತಿಯನ್ನೂ ತೋರ್ಪಡಿಸಿದ್ದರು.
ಅಣ್ಣಾ ಹಜಾರೆ ತಂಡದಲ್ಲಿ ಸದಸ್ಯರಾಗಿದ್ದ ಸ್ವಾಮಿ ಅಗ್ನಿವೇಶ್ ಹಜಾರೆ ಹೋರಾಟಕ್ಕೆ ಬಹುಪರಾಕ್ ಹೇಳುತ್ತಲೇ, ಮತ್ತೊಂದೆಡೆ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಜತೆ ನಡೆಸಿದ ಮಾತುಕತೆ ಸಾಮಾಜಿಕ ಜಾಲ ತಾಣದಲ್ಲಿ ಬಯಲಾಗಿದ್ದು, ಸ್ವಾಮಿಯ ನಿಜಬಣ್ಣ ಬಯಲಾಗಿದೆ.
'ಜೈ ಹೋ ಕಪಿಲ್ ಮಹಾರಾಜ್... ಹೌದು ನಿಜಕ್ಕೂ ಜನಲೋಕಪಾಲ ತುಂಬಾ ಅವಶ್ಯಕತೆ ಇದೆ. ಆದರೆ ಅಣ್ಣಾ ತಂಡ ಇದೆಯಲ್ಲ ಹುಚ್ಚರ ಥರ ಆಡ್ತಿದೆ. ಅಷ್ಟೇ ಅಲ್ಲ ದಾರಿ ತಪ್ಪಿದ ಸಲಗದಂತೆ ವರ್ತಿಸುತ್ತಿದ್ದಾರೆ. ನೀವು ಎಷ್ಟು ಒಪ್ಪುತ್ತಾ ಹೋಗ್ತಿರೋ ಅವರು ಕೂಡ ಹೆಚ್ಚು ಬೇಡಿಕೆ ಇಡ್ತಾರೆ. ಅವರ ಹಠಮಾರಿತನ ನಮಗೆ ನಾಚಿಕೆ ಆಗೋ ಥರಾ ಆಗ್ತಿದೆ. ಸಂಸತ್ ಒತ್ತಾಯ ಮಾಡ್ತು, ಪ್ರಧಾನಿಗಳೂ ಕೂಡ ಉಪವಾಸ ನಿಲ್ಲಿಸುವಂತೆ ಒತ್ತಾಯ ಮಾಡಿದ್ರೂ ಒಪ್ಪುತ್ತಿಲ್ಲ ಅಂದ್ರೆ ಇದು ನ್ಯಾಯವಲ್ಲ'....ಇದು ಸ್ವಾಮಿ ಕಪಿಲ್ ಜತೆ ದೂರವಾಣಿಯಲ್ಲಿ ನಡೆಸಿದ ಮಾತಿನ ಸಾರಾಂಶ.
ಮಹಾರಾಜ್, ಕಪಿಲ್, ಸಿಬಲ್ ಎಂದರೆ ಯಾರು ಎಂದು ಅಣ್ಣಾ ತಂಡ ಪ್ರಶ್ನಿಸಿದ್ದು, ಈಗಾಗಲೇ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ಸಂಭಾಷಣೆ ಬಗ್ಗೆ ವಿವರಣೆ ನೀಡುಂತೆ ಅಣ್ಣಾ ತಂಡದ ಕಿರಣ್ ಬೇಡಿ, ಅಗ್ನಿವೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನಿಜಕ್ಕೂ ತಿರುಚಿರುವುದು-ಅಗ್ನಿವೇಶ್ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ತನ್ನ ಮತ್ತು ಕಪಿಲ್ ಜತೆಗಿನ ದೂರವಾಣಿ ಸಂಭಾಷಣೆ ತಿರುಚಿರುವುದಾಗಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ಸ್ವಾಮಿ ಅಗ್ನಿವೇಶ್ ಐಎಎನ್ಎಸ್ ಸುದ್ದಿಸಂಸ್ಥೆ ಜತೆ ಮಾತನಾಡುತ್ತ ಸ್ಪಷ್ಟನೆ ನೀಡಿದ್ದಾರೆ.
ಉದ್ದೇಶಪೂರ್ವಕವಾಗಿ ತಿರುಚಿ ಸೃಷ್ಟಿಸಿರುವಂತಹದ್ದಾಗಿದೆ. ಇದು ಕಪಿಲ್ ಸಿಬಲ್ ಅಲ್ಲ, ಹಾಗಾದರೆ ಮಾತನಾಡುತ್ತಿರುವ ಮತ್ತೊಬ್ಬ ವ್ಯಕ್ತಿ ಯಾರೆಂದು ಸ್ವಾಮಿ ಪ್ರಶ್ನಿಸಿದ್ದಾರೆ. ನಾನು ಯಾವತ್ತೂ ಯಾರನ್ನೂ ಮಹಾರಾಜ್ ಎಂದು ಸಂಬೋಧಿಸಿಲ್ಲ, ಹಾಗಿದ್ದ ಮೇಲೆ ನಾನು ಕಪಿಲ್ ಅಥವಾ ಕಪಿಲ್ ಮಹಾರಾಜ್ ಎಂದು ಹೇಳುತ್ತೇನೆಯೇ. ನನಗೆ ಸಿಬಲ್ ಹೆಸರಿನ ಬಹಳಷ್ಟು ಮಂದಿ ಪರಿಚಯವಿದ್ದಾರೆ. ಹಾಗಂತ ಆ ವ್ಯಕ್ತಿ ವೀಡಿಯೋದಲ್ಲಿ ಇದ್ದಾರೆಯೇ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ ವೀಡಿಯೋದಲ್ಲಿ, ತನ್ನನ್ನು ಮಾತುಕತೆಯ ಸಂಧಾನಕಾರನನ್ನಾಗಿ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಹೇಳಲಾಗಿದೆ. ಆದರೆ ನಾನು ಅಣ್ಣಾ ಹಜಾರೆ ತಂಡದಲ್ಲಿ ಒರ್ವ ಸದಸ್ಯ ಅಷ್ಟೇ, ನಾನು ಯಾವತ್ತೂ ಸಂಧಾನಕಾರನಾಗಬೇಕೆಂದು ಬಯಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.