ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಟಿಗಾಗಿ ನೋಟು ಹಗರಣ: ಅಮರ್ ಸಿಂಗ್ ಬಂಧನ, ತಿಹಾರ್ ಜೈಲಿಗೆ (Money in Parliament | Amar Singh | Cash For Votes | UPA Scam | Nuclear Deal | Kannada News | Latest News in Kannada | Politics)
ದೇಶದಲ್ಲಿ ಘಟಾನುಘಟಿ ರಾಜಕಾರಣಿಗಳು ಜೈಲು ಸೇರುವ ಪ್ರಕ್ರಿಯೆಗೆ ಹೊಸ ಸೇರ್ಪಡೆ, ವರ್ಣರಂಜಿತ ರಾಜಕಾರಣಿ ಎಂದೇ ಖ್ಯಾತರಾದ ರಾಜ್ಯಸಭಾ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಈಗ ತಿಹಾರ್ ಜೈಲಿನತ್ತ ಮುಖ ಮಾಡಿದ್ದಾರೆ. 2008ರಲ್ಲಿ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಯುಪಿಎ ಸರಕಾರವು ಅವಿಶ್ವಾಸ ಮತ ಎದುರಿಸುತ್ತಿದ್ದಾಗ, ಸಂಸತ್ತಿನಲ್ಲಿ ಸಂಸದರನ್ನು ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು 'ಓಟಿಗಾಗಿ ನೋಟು ಪ್ರಕರಣ'ಕ್ಕೆ ಸಂಬಂಧಿಸಿದಂತೆ ಮಂಗಳವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬೆಳಿಗ್ಗೆಯೇ ನಾಟಕ ಆರಂಭವಾಗಿದ್ದು, ತನಗೆ ಆರೋಗ್ಯ ಸರಿ ಇಲ್ಲದಿರುವ ಕಾರಣ ವಿಚಾರಣೆಗೆ ವಿನಾಯಿತಿ ಕೋರಿ ಅಮರ್ ಸಿಂಗ್ ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿರುವ ಬಗ್ಗೆ ನ್ಯಾಯಾಲಯ ಕೆಂಡಾಮಂಡಲವಾದ ತಕ್ಷಣವೇ, 'ಆರೋಗ್ಯ ಸರಿ ಇಲ್ಲದಿದ್ದರೂ ನ್ಯಾಯಾಲಯಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಹಾಜರಾಗುತ್ತಿದ್ದೇನೆ' ಎನ್ನುತ್ತಾ ಅಮರ್ ಸಿಂಗ್ ಅವರು ಹಾಜರಾಗಿದ್ದರು.

ಅನಾರೋಗ್ಯದ ನೆಪ ನೀಡಿದರೂ ನ್ಯಾಯಾಲಯವು ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದು, ಸಂಸತ್ತಿನಲ್ಲಿ ಹಣ ತೋರಿಸಿ, ಈ 'ಓಟಿಗಾಗಿ ನೋಟು' ಪ್ರಕರಣವನ್ನು ಬಯಲಿಗೆಳೆದ ಬಿಜೆಪಿಯ ಮೂವರು ಮಾಜಿ ಸಂಸದರು ಕೂಡ ಜೈಲು ಪಾಲಾಗಿದ್ದಾರೆ. ಅವರೆಲ್ಲರಿಗೂ ಸೆಪ್ಟೆಂಬರ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2008ರ ಜುಲೈ 22ರಂದು ಸಂಸತ್ತಿನಲ್ಲಿ ಕೋಟಿ ಕೋಟಿ ಹಣದ ಕಂತೆಯನ್ನು ಪ್ರದರ್ಶಿಸುವ ಮೂಲಕ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸಂಸದರ ಈ ಹೇಯ ವರ್ತನೆಯು ವಿಶ್ವಾದ್ಯಂತ ಭಾರೀ ಸುದ್ದಿ ಮಾಡಿ, ದೇಶವೇ ತಲೆ ತಗ್ಗಿಸುವಂತಾಗಿತ್ತು. ಇದು ಸರಕಾರವನ್ನು ಪಾರು ಮಾಡಲೆಂದು ಸಂಸದರ ಖರೀದಿಗಾಗಿ ನೀಡಲಾದ ಹಣ ಎಂದು ಬಿಜೆಪಿ ಸಂಸದರಾಗಿದ್ದ ಫಗನ್ ಕುಲಾಸ್ಥೆ, ಮಹಾವೀರ್ ಭಗೋಡಾ ಮತ್ತು ಅಶೋಕ್ ಅರ್ಗಲ್ ಸಂಸತ್ತಿನಲ್ಲಿ ಹಣ ಪ್ರದರ್ಶಿಸಿದ್ದರು. ಅವರಿಗೇ ಈ ಹಣದ ಆಮಿಷವನ್ನು ನೀಡಲಾಗಿತ್ತು.

ಇದೇ ವೇಳೆ, ಈ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರ ಮಾಜಿ ರಾಜಕೀಯ ಸಲಹೆಗಾರ ಸುಧೀಂದ್ರ ಕುಲಕರ್ಣಿ ಅವರು ಅಮೆರಿಕ ಪ್ರವಾಸದಲ್ಲಿರುವುದರಿಂದ ಹಾಜರಾತಿಗೆ ವಿನಾಯತಿ ಕೋರಿದ್ದು, ಸೆಪ್ಟೆಂಬರ್ 19ರಂದು ವಿಚಾರಣೆಗೆ ಹಾಜರಾಗುವುದಾಗಿ ನ್ಯಾಯಾಲಯಕ್ಕೆ ವಕೀಲರ ಮೂಲಕ ತಿಳಿಸಿದ್ದಾರೆ.

ಅಮರ್ ಸಿಂಗ್ ಅವರು ಯಾರಿಗಾಗಿ ಹಣದ ವ್ಯವಸ್ಥೆ ಮಾಡಿದ್ದರು, ಯಾರ ಪರವಾಗಿ ಕೆಲಸ ಮಾಡಿದ್ದರು, ಕೇಂದ್ರದ ಯುಪಿಎ ಸರಕಾರವನ್ನು ಉಳಿಸಲೆಂದೇ ಕೆಲಸ ಮಾಡಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿರುವುದರಿಂದ ಈ ಓಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆಗಳಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸಂಸತ್ತಿನಲ್ಲಿ ಹಣ, ಅಮರ್ ಸಿಂಗ್, ಓಟಿಗಾಗಿ ನೋಟು, ಸಂಸದರ ಖರೀದಿ ಹಗರಣ, ಯುಪಿಎ, ಮನಮೋಹನ್ ಸಿಂಗ್, ಭಾರತ ಅಮೆರಿಕ ಅಣು ಒಪ್ಪಂದ, ಕನ್ನಡ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಭಾರತೀಯ ಸುದ್ದಿ