ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎ ರಕ್ಷಣೆಗೆ ಓಟಿಗಾಗಿ ನೋಟು: ಹೆಸರು ಬಹಿರಂಗಪಡಿಸುವರೇ ಅಮರ್ ಸಿಂಗ್? (Money in Parliament | Amar Singh | Cash For Votes | Kannada News)
ಕೇಂದ್ರದ ಯುಪಿಎ ಸರಕಾರದ 'ಓಟಿಗಾಗಿ ನೋಟು' ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ತೀವ್ರ ಒತ್ತಡದ ಕಾರಣದಿಂದಾಗಿ ದೆಹಲಿ ಪೊಲೀಸರು ಎಚ್ಚೆತ್ತುಕೊಂಡ ಪರಿಣಾಮ ಅಮರ್ ಸಿಂಗ್ ಬಂಧನವಾಗಿದ್ದು, ಈ "ಶತಮಾನದ ಹಗರಣವಾಗಿರುವ" 'ಓಟಿಗಾಗಿ ನೋಟು' ಪ್ರಕರಣದ ನಿಜವಾದ ಫಲಾನುಭವಿಯೆಂದರೆ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರಕಾರ. ಅದರ ಬಗ್ಗೆ ಯಾರೂ ಧ್ವನಿಯೆತ್ತುತ್ತಿಲ್ಲವೇಕೆ ಎಂದು ಬಿಜೆಪಿ ಬಲವಾಗಿ ಪ್ರಶ್ನಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2008ರ ಜುಲೈ 22ರಂದು, ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡಿದ್ದರಿಂದಾಗಿ ಮನಮೋಹನ್ ಸರಕಾರವು ಅವಿಶ್ವಾಸ ಮತ ಎದುರಿಸಬೇಕಾಗಿತ್ತು. ಪತನದಂಚಿನಲ್ಲಿದ್ದ ಸರಕಾರವನ್ನು ಉಳಿಸಲು ಸಂಸದರ ಖರೀದಿಗೆ ವ್ಯವಸ್ಥೆ ಮಾಡಿದ್ದ ಆರೋಪದಲ್ಲಿ ಅಮರ್ ಸಿಂಗ್ ಅವರನ್ನು ಮಂಗಳವಾರ ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ, ಬಂಧಿತ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರು ಇದರ ಹಿಂದಿರುವ ವ್ಯಕ್ತಿಗಳ ಹೆಸರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಮರ್ ಸಿಂಗ್ ಬಾಯಿ ಬಿಡಲಿ
ಯಾರ ಹೆಸರೇ ಹೊರಗೆ ಬಂದರೂ, ಓಟಿಗಾಗಿ ನೋಟು ನೀಡಿ ಲಾಭವಾಗಿದ್ದು ಯುಪಿಎಗೆ. ಇದರ ಬಗ್ಗೆ ಯಾರು ಕೂಡ ಬಾಯಿ ಬಿಡುತ್ತಿಲ್ಲವೇಕೆ? ಅಮರ್ ಸಿಂಗ್ ಅವರನ್ನು ಬಂಧಿಸಿರುವುದು ಮತ್ತು ಅವರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿರುವ ರೀತಿಯನ್ನು ನೋಡಿದರೆ, ತಾನು ಯಾರಿಗಾಗಿ ಕೆಲಸ ಮಾಡಿದೆ ಎಂಬುದನ್ನು ಅವರು ಬಾಯಿ ಬಿಡಲೇಬೇಕು ಎಂದು ರೂಡಿ ಒತ್ತಾಯಿಸಿದ್ದಾರೆ.

ಹಣ ಬಂದದ್ದು ಎಲ್ಲಿಂದ?
ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ಈ ಹಣ ಬಂದಿದ್ದು ಎಲ್ಲಿಂದ ಎಂಬುದೇ ದೊಡ್ಡ ಸಂಗತಿಯಾಗಿದ್ದು, ಹಣದ ಮೂಲ ಪತ್ತೆಯಾಗಬೇಕು ಎಂದು ಹೇಳಿದರು. ಈ ಮೊದಲು ಸುಪ್ರೀಂ ಕೋರ್ಟು ಕೂಡ ಸಿಬಿಐಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಹಣದ ಮೂಲ ಪತ್ತೆ ಹಚ್ಚುವಂತೆ ನಿರ್ದೇಶಿಸಿತ್ತು. ಸಿಬಿಐ ಸಲ್ಲಿಸಲಾಗಿದ್ದ ಚಾರ್ಜ್‌ಶೀಟ್‌ನಲ್ಲಿ ಅಮರ್ ಸಿಂಗ್ ಅವರನ್ನೇ ಪ್ರಧಾನ ಆರೋಪಿಯನ್ನಾಗಿ ಬಿಂಬಿಸಿ, ಸಿಂಗ್ ಮತ್ತು ಅವರ ಕಾರ್ಯದರ್ಶಿ ಸಂಜೀವ್ ಸಕ್ಸೇನಾ ಸೇರಿಕೊಂಡು 1 ಕೋಟಿ ಹಣವನ್ನು ಅಕ್ರಮವಾಗಿ ನೀಡಲು ಕ್ರಿಮಿನಲ್ ಒಳಸಂಚು ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಮತದಾನದಿಂದ ಹೊರಗುಳಿಯುವಂತೆ ಆಮಿಷ ನೀಡಿ ಬಿಜೆಪಿಯ ಮೂವರು ಸಂಸದರಿಗೆ ಹಣ ಒಪ್ಪಿಸಿದ್ದ ಸಂಜೀವ್ ಸಕ್ಸೇನಾರನ್ನು ಕೂಡ ಬಂಧಿಸಲಾಗಿದ್ದು, ಹಣ ಕೈಬದಲಾಯಿಸಲು ನೆರವು ನೀಡಿದ್ದ ಸೊಹೇಲ್ ಹಿಂದುಸ್ತಾನಿಯನ್ನು ಕೂಡ ಬಂಧಿಸಲಾಗಿತ್ತು. ಸಂಸದರಿಗೆ ತಲಾ ಮೂರು ಕೋಟಿ ರೂಪಾಯಿಯ ಭರವಸೆ ನೀಡಲಾಗಿತ್ತು ಎನ್ನಲಾಗಿದ್ದು, ವಿಶ್ವಾಸಮತಕ್ಕೆ ಮುನ್ನ ಅಡ್ವಾನ್ಸ್ ರೂಪದಲ್ಲಿ 1 ಕೋಟಿ ನೀಡಲಾಗಿತ್ತು. ಈಗ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನಿಂದಾಗಿ, ಪೊಲೀಸರ ಮೇಲೆ ಹಣದ ಮೂಲ ಪತ್ತೆ ಹಚ್ಚುವ ಒತ್ತಡ ಹೆಚ್ಚಾಗಿದೆ. ಅಮರ್ ಸಿಂಗ್‌ಗೆ ಭಾರೀ ರಾಜಕೀಯ ಪ್ರಭಾವ ಇರುವುದರಿಂದಾಗಿ, ತಾವಾಗಿಯೇ ಅವರನ್ನು ಬಂಧಿಸುವ ಬದಲು, ನ್ಯಾಯಾಲಯದ ಆದೇಶ ಪಡೆದ ಬಳಿಕವೇ ಬಂಧಿಸುವ ಬಗ್ಗೆ ದೆಹಲಿ ಪೊಲೀಸರು ನಿರ್ಧರಿಸಿದ್ದರು ಎಂದು ಮೂಲಗಳು ಹೇಳಿವೆ.

ಅಂದು ಬಿಜೆಪಿಯಲ್ಲಿದ್ದ ಸುಧೀಂದ್ರ ಕುಲಕರ್ಣಿ ಅವರು, ಯಾವ ಬಿಜೆಪಿ ಸಂಸದನನ್ನು ಖರೀದಿಸಬಹುದು ಎಂಬ ಬಗ್ಗೆ ಸಲಹೆ ನೀಡಿದ್ದರು ಎಂದು ಆರೋಪಿಸಲಾಗಿದ್ದು, ಅವಿಶ್ವಾಸ ಗೊತ್ತುವಳಿಯಲ್ಲಿ ಪಾರಾಗಲು ಯುಪಿಎ ಸರಕಾರವು ಲಂಚ ನೀಡಲು ಸಜ್ಜಾಗಿದೆ ಎಂಬುದನ್ನು ಬಯಲಿಗೆಳೆಯುವುದಕ್ಕಾಗಿ 'ವಿಝಲ್ ಬ್ಲೋಯರ್' ರೂಪದಲ್ಲಿ ಕಾರ್ಯವೆಸಗಿರುವುದಾಗಿ ಹೇಳಿದ್ದರು.

ಪ್ರಕರಣ ಬಯಲಿಗೆಳೆದವರ ಬಂಧನ ಎಷ್ಟು ಸರಿ?
ಆದರೆ, ಅಮರ್ ಬಂಧನವನ್ನು ಸ್ವಾಗತಿಸಿರುವ ರವಿಶಂಕರ್ ಪ್ರಸಾದ್, ಆದರೆ ಪ್ರಕರಣ ಬಯಲಿಗೆಳೆಯಲು ನೆರವಾದ ಬಿಜೆಪಿಯ ಮಾಜಿ ಸಂಸದರ (ಫಗಾನ್ ಸಿಂಗ್ ಕುಲಾಸ್ಥೆ ಮತ್ತು ಮಹಾವೀರ್ ಭಗೋರಾ) ಬಂಧನಕ್ಕೆ ಆಕ್ಷೇಪ ಎತ್ತಿದ್ದಾರೆ. ಅಲ್ಲದೆ, ಇದುವರೆಗೆ ಈ ಪ್ರಕರಣದ ತನಿಖೆಯನ್ನು ಕೇಂದ್ರವು ಉದ್ದೇಶಪೂರ್ವಕವಾಗಿ ವಿಳಂಬಿಸಿದ್ದು, 3 ವರ್ಷಗಳ ಬಳಿಕವಾದರೂ ಈ ಬಂಧನ ಸಾಧ್ಯವಾಗಿದ್ದು ಸುಪ್ರೀಂ ಕೋರ್ಟಿನ ಹಸ್ತಕ್ಷೇಪದ ಕಾರಣದಿಂದಾಗಿ ಎಂದು ನ್ಯಾಯಾಲಯವನ್ನು ಶ್ಲಾಘಿಸಿದರು.

ಕುಲಾಸ್ಥೆ ಮತ್ತು ಭಗೋರಾ ಇಬ್ಬರೂ ಇಂಥದ್ದೊಂದು ಪ್ರಕರಣ ಬಯಲಿಗೆಳೆದು ಮಹಾನ್ ದೇಶಸೇವೆ ಮಾಡಿದ್ದಾರೆ. ಮನಮೋಹನ್ ಸಿಂಗ್-ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರಕಾರದ ಬಂಡವಾಳ ಬಯಲು ಮಾಡಿದ್ದಾರೆ. ಅಂಥವರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ವಿಷಾದಿಸಿದ ಅವರು, ನಮ್ಮ ಮಾಜಿ ಸಂಸದರು ದೆಹಲಿ ಪೊಲೀಸರ ಈ ತನಿಖೆಯ ವೈಚಿತ್ರ್ಯವನ್ನು ಶೀಘ್ರವೇ ಬಯಲಿಗೆ ತರಲಿದ್ದಾರೆ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸಂಸತ್ತಿನಲ್ಲಿ ಹಣ, ಅಮರ್ ಸಿಂಗ್, ಓಟಿಗಾಗಿ ನೋಟು, ಸಂಸದರ ಖರೀದಿ ಹಗರಣ, ಯುಪಿಎ, ಮನಮೋಹನ್ ಸಿಂಗ್, ಭಾರತ ಅಮೆರಿಕ ಅಣು ಒಪ್ಪಂದ, ಕನ್ನಡ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಭಾರತೀಯ ಸುದ್ದಿ