ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ಹೈಕೋರ್ಟ್ ಬಳಿ ಬಾಂಬ್ ಸ್ಫೋಟ; ಸಾವಿನ ಸಂಖ್ಯೆ 12 (Delhi Blast | Breaking News in Kannada | Kannada Website)
WD

ಸ್ಫೋಟ ಪ್ರದೇಶದಲ್ಲಿ ಸುತ್ತುವರಿದಿರುವ ಪೊಲೀಸರು

ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಗ್ಗೆ ಹತ್ತೂಕಾಲು ಸುಮಾರಿಗೆ ಸಂಭವಿಸಿರುವ ಪ್ರಬಲ ಬಾಂಬ್ ಸ್ಫೋಟವು ಇಡೀ ದೇಶವನ್ನೇ ನಡುಗಿಸುವಂತೆ ಮಾಡಿದೆ. ನವದಹೆಲಿಯ ಹೈಕೋರ್ಟ್ ಬಳಿ ಪ್ರಬಲ ಸ್ಫೋಟ ಸಂಭವಿಸಿದ್ದು, ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ. ಕನಿಷ್ಠ ಪಕ್ಷ 62 ಮಂದಿ ಗಾಯಗೊಂಡಿರುವುದು ದೃಢಪಟ್ಟಿದ್ದು, ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದಾರೆ.

ಸಂಸತ್ತಿನಲ್ಲಿ ಚಿದಂಬರಂ ಹೇಳಿಕೆ
ಸಂಸತ್ತಿನಲ್ಲಿ ಬೆಳಿಗ್ಗೆ ಕಲಾಪ ಮುಂದೂಡಲಾದ ಬಳಿಕ ಹೇಳಿಕೆ ನೀಡಿದ ಗೃಹ ಸಚಿವ ಪಿ.ಚಿದಂಬರಂ ಅವರು, ಈ ಸ್ಫೋಟವನ್ನು ಸರಕಾರವು ಖಂಡಿಸುತ್ತದೆ. ಎಲ್ಲರೂ ಶಾಂತಿಯಿಂದಿರುವಂತೆ ಮತ್ತು ಒಗ್ಗಟ್ಟಿನಲ್ಲಿರುವಂತೆ ಮನವಿ ಮಾಡಿಕೊಂಡರಲ್ಲದೆ, ಪ್ರಕರಣದ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆದು ಶಿಕ್ಷಿಸುವುದಾಗಿ ಭರವಸೆ ನೀಡಿದರು.

20 ನಿಮಿಷಗಳೊಳಗೆ ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್‌ಗಳು ಬಂದಿವೆ ಎಂದ ಅವರು, ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‌ಜಿ) ಕೂಡ ರವಾನಿಸಲಾಗಿದೆ. ತನಗೆ ದೊರೆತಿರುವ ಇತ್ತೀಚಿನ ಮಾಹಿತಿಯ ಪ್ರಕಾರ 9 ಮಂದಿ ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ)ಗೆ ಒಪ್ಪಿಸಲಾಗಿದೆ ಎಂದಿದ್ದಾರೆ.

ತನಿಖೆಗೆ ಮಳೆ ಅಡ್ಡಿ
10.13ರ ಸುಮಾರಿಗೆ ಹೈಕೋರ್ಟ್ ಮುಂಭಾಗದಲ್ಲಿರುವ ಗೇಟ್ ನಂಬರ್ 5 ಹಾಗೂ 6ರ ನಡುವೆ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ನವದೆಹಲಿಯ ಹೃದಯಭಾಗವಾದ ಇಂಡಿಯಾ ಗೇಟ್ ಬಳಿ ಇರುವ ಹೈಕೋರ್ಟ್ ಆವರಣದಲ್ಲಿಯೇ ಈ ಸ್ಫೋಟ ಸಂಭವಿಸಿರುವುದು ತೀರಾ ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ತೀವ್ರವಾಗಿ ಮಳೆಯೂ ಸುರಿಯಲಾರಂಭಿಸಿದ್ದು, ತನಿಖೆಗೆ ಅಡಚಣೆಯಾಗಿದೆ.

ಇದೇ ವೇಳೆ, ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿದೆ ಎಂದು ವರದಿಗಳು ತಿಳಿಸಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ರಾಜಧಾನಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿ ಸ್ಫೋಟ ಸಂಭವಿಸಿದೆ.

ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ಪ್ರಾಥಮಿಕ ವರದಿಯಂತೆ ಸೂಟ್‌ಕೇಸ್‌ನಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡಿರುವುದಾಗಿ ಶಂಕಿಸಲಾಗಿದೆ. ಗಾಯಗೊಂಡರವರ ಹಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ. ಈಚಿನ ವರದಿಯ ಪ್ರಕಾರ, 10 ಮಂದಿ ಸಾವನ್ನಪ್ಪಿದ್ದು, 65ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ ಆರ್‌ಎಮ್‌ಎಲ್ ಹಾಗೂ ಸಫ್ದರ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಧಾವಿಸಿದ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಸಹ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ದೇಶಾದ್ಯಂತ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಗೃಹ ಸಚಿವ ಚಿದಂಬರಂ ಅವರು ಕೂಡ ಸ್ಫೋಟ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ.

ದೇಶದಲ್ಲಿ ಪದೇ ಪದೇ ಇಂತಹಾ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿರುವುದು ಯುಪಿಎ ಸರಕಾರವು ಭಯೋತ್ಪಾದನೆಯ ಕುರಿತು ಮೃದು ಧೋರಣೆ ಅನುಸರಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಇದಲ್ಲದೆ, ಭಾವೀ ಪ್ರಧಾನಿ ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ, ಶೇ.99 ಭಯೋತ್ಪಾದನಾ ದಾಳಿಗಳನ್ನು ನಿಲ್ಲಿಸಲು ಯುಪಿಎ ಸರಕಾರ ಸಮರ್ಥರಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ 2008ರ 26/11 ಮುಂಬೈ ದಾಳಿಯ ಬಳಿಕ ದೇಶದೆಲ್ಲೆಡೆ ಆಗಿರುವ ಭಯೋತ್ಪಾದನಾ ದಾಳಿಗಳು, ಬಾಂಬ್ ಸ್ಫೋಟಗಳು ಜನರ ಮನಸ್ಸಿನಲ್ಲಿ ಸುಳಿದಾಡುತ್ತಲೇ ಇದ್ದು, ಲೆಕ್ಕ ಇಡಲಾರದಷ್ಟು ಕೃತ್ಯಗಳು ಸಂಭವಿಸಿರುವುದು ಇಲ್ಲಿ ಗಮನಿಸಬೇಕಾದ ಅಂಶ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ನವದೆಹಲಿ, ದೆಹಲಿ ಸ್ಫೋಟ, ಹೈಕೋರ್ಟ್, ಸ್ಫೋಟ, ದೆಹಲಿ ಪೊಲೀಸ್, ದೆಹಲಿ ಹೈಕೋರ್ಟ್, ಕನ್ನಡ ಸುದ್ದಿ, ಭಾರತ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ಕನ್ನಡ ವೆಬ್ ಸೈಟ್