ನವದೆಹಲಿಯ ಹೈಕೋರ್ಟ್ ಆವರಣದಲ್ಲಿ ಬುಧವಾರ ಭಯೋತ್ಪಾದಕರು ನಡೆಸಿದ ಬಾಂಬ್ ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದು, 45ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 1996ರಿಂದ ಈವರೆಗೆ ಕಳೆದ 15 ವರ್ಷಗಳಲ್ಲಿ ಭಯೋತ್ಪಾದಕರು ಭಾರತದ ರಾಜಧಾನಿ ನವದೆಹಲಿಯ ಮೇಲೆ 19 ಬಾರಿ ಬಾಂಬ್ ದಾಳಿ ನಡೆಸಿದ್ದು, ದಿಲ್ಲಿ ಸ್ಫೋಟದ ವಿವರಗಳು ಇಲ್ಲಿವೆ.
2011ರ ಮೇ 25ರಂದು ದೆಹಲಿ ಹೈಕೋರ್ಟ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕಾರೊಂದು ಜಖಂಗೊಂಡಿದ್ದು, ಯಾರೊಬ್ಬರೂ ಗಾಯಗೊಂಡಿರಲಿಲ್ಲ.
2010ರ ಸೆಪ್ಟೆಂಬರ್ 19ರಂದು ಜಾಮಾ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕಾರೊಂದು ಜಖಂಗೊಂಡಿದ್ದು, ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
2008ರ ಸೆಪ್ಟೆಂಬರ್ 27ರಂದು ದೆಹಲಿ ಮೆಹ್ರೌಲಿ ಹೂವಿನ ಮಾರುಕಟ್ಟೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 4 ಜನ ಮೃತಪಟ್ಟಿದ್ದು, 15 ಜನ ಗಾಯಗೊಂಡಿದ್ದರು.
2008ರ ಸೆಪ್ಟೆಂಬರ್ 13ರಂದು ಕರೋಲ್‌ಬಾಗ್, ಗ್ರೇಟರ್ ಕೈಲಾಶ್ ಮತ್ತು ಕನಾಟ್ ಪ್ಲೇಸ್ ಪ್ರದೇಶದಲ್ಲಿ ನಡೆದ ಐದು ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 24 ಜನರು ಮೃತಪಟ್ಟು, 100 ಮಂದಿ ಗಾಯಗೊಂಡಿದ್ದರು.
2006ರ ಏಪ್ರಿಲ್ 14ರಂದು ದೆಹಲಿಯ ಜಾಮಾ ಮಸೀದಿ ಒಳಗೆ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ 14 ಜನರು ಗಾಯಗೊಂಡಿದ್ದರು.
2005ರ ಅಕ್ಟೋಬರ್ 29ರಂದು ದೀಪಾವಳಿ ಹಬ್ಬಕ್ಕೂ ಮುನ್ನ ದೆಹಲಿಯ ಸರೋಜಿನಿ ನಗರ, ಗೋವಿಂದಪುರ ಮತ್ತು ಓಕ್ಲಾದಲ್ಲಿ ನಡೆದ ಮೂರು ಬಾಂಬ್ ಸ್ಫೋಟದಲ್ಲಿ ಕನಿಷ್ಠ 62 ಜನರು ಮೃತಪಟ್ಟು, 210 ಜನರು ಗಾಯಗೊಂಡಿದ್ದರು.
2005ರ ಮೇ 22ರಂದು ದೆಹಲಿಯ ಎರಡು ಚಿತ್ರಮಂದಿರಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು 40 ಜನರು ಗಾಯಗೊಂಡಿದ್ದರು.
2000ದ ಫೆಬ್ರವರಿ 27ರಂದು ದೆಹಲಿಯ ಪಹಾರ್‌ಗಂಜ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಎಂಟು ಮಂದಿ ಗಾಯಗೊಂಡಿದ್ದರು.
2000ದ ಜನವರಿ 6ರಂದು ಹಳೆ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದರು.
2001ರಲ್ಲಿ ಸಂಸತ್ ಭವನದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 11 ಜನರು ಮೃತಪಟ್ಟು 30 ಜನರು ಗಾಯಗೊಂಡಿದ್ದರು.
1999ರ ಜೂನ್ 3ರಂದು ಚಾಂದಿನಿ ಚೌಕ್‌ನಲ್ಲಿ ನಡೆದ ನಡೆದ ಬಾಂಬ್ ಸ್ಫೋಟದಲ್ಲಿ 27 ಮಂದಿ ಗಾಯಗೊಂಡಿದ್ದರು.
1997ರ ಡಿಸೆಂಬರ್ 30ರಂದು ಪಂಜಾಬಿ ಬಾಗ್‌ನಲ್ಲಿ ನಡೆದ ಸ್ಫೋಟದಲ್ಲಿ ನಾಲ್ವರು ಮೃತಪಟ್ಟು 30 ಮಂದಿ ಗಾಯಗೊಂಡಿದ್ದರು.
1997ರ ನವೆಂಬರ್ 30ರಂದು ಚಾಂದಿನಿ ಚೌಕ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೂರು ಮಂದಿ ಮೃತಪಟ್ಟು, 73 ಜನರು ಗಾಯಗೊಂಡಿದ್ದರು.
1997ರ ಅಕ್ಟೋಬರ್ 26ರಂದು ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ನಡೆದ ಅವಳಿ ಬಾಂಬ್ ದಾಳಿಯಲ್ಲಿ ಕನಿಷ್ಠ 34 ಮಂದಿ ಮೃತಪಟ್ಟು, ಒಬ್ಬ ವ್ಯಕ್ತಿ ಗಾಯಗೊಂಡಿದ್ದರು.
1997ರ ಅಕ್ಟೋಬರ್ 18ರಂದು ರಾಣಿ ಬಾಗ್ ಮಾರುಕಟ್ಟೆಯಲ್ಲಿ ನಡೆದ ಅವಳಿ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು 23 ಮಂದಿ ಗಾಯಗೊಂಡಿದ್ದರು.
1997ರ ಅಕ್ಟೋಬರ್ 10ರಂದು ದೆಹಲಿ ವಿಶ್ವ ವಿದ್ಯಾಲಯದ ಸಮೀಪದ ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು 18 ಮಂದಿ ಗಾಯಗೊಂಡಿದ್ದರು.
1997ರ ಅಕ್ಟೋಬರ್ 1ರಂದು ಸದಾರ್ ಬಜಾರ್‌ನಲ್ಲಿ ನಡೆದ ಎರಡು ಬಾಂಬ್ ಸ್ಫೋಟದಲ್ಲಿ 30 ಮಂದಿ ಗಾಯಗೊಂಡಿದ್ದರು.
1996ರ ಮೇ 23ರಂದು ಲಜ್‌ಪತ್ ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 16 ಜನರು ಮೃತಪಟ್ಟಿದ್ದರು.