ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಓಟಿಗಾಗಿ ನೋಟು' ನನ್ನನ್ನೇ ಬಂಧಿಸಿ: ಯುಪಿಎಗೆ ಆಡ್ವಾಣಿ ಸವಾಲು (Cash for Vote | Advani | Sting Operation | Kannada News)
PTI
ಓಟಿಗಾಗಿ ನೋಟು ನೀಡಿ ಸಂಸದರನ್ನೇ ಖರೀದಿಸಿ .ಯುಪಿಎ ಸರಕಾರ ಬಚಾವ್ ಮಾಡಿಕೊಂಡ ಪ್ರಕರಣವು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ಕೋಲಾಹಲವೆಬ್ಬಿಸಿದ್ದು, ಸರಕಾರದ ಈ ಲಂಚ ಪ್ರಕರಣವನ್ನು ಬಯಲಿಗೆಳೆಯಲು ಸ್ಟಿಂಗ್ ಆಪರೇಶನ್ (ಕುಟುಕು ಕಾರ್ಯಾಚರಣೆ) ಮಾಡಿಸಿದ್ದು ನಾನು, ತಾಕತ್ತಿದ್ದರೆ ನನ್ನನ್ನೂ ಬಂಧಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಗುಡುಗಿದರು. ಆಡ್ವಾಣಿಯವರ ಈ ಹೇಳಿಕೆಯಿಂದ ಸರಕಾರ ಮತ್ತು ಈಗ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ.

ತಾಜಾ ಸುದ್ದಿ: ಸಂಸತ್ತಿನ ಉಭಯ ಸದನಗಳನ್ನೂ ಗುರುವಾರ ಮುಂದೂಡಲಾಗಿದ್ದು, ಮುಂಗಾರು ಅಧಿವೇಶನ ಅಂತ್ಯ ಕಂಡಿದೆ.

ಓಟಿಗಾಗಿ ನೋಟು ಪ್ರಕರಣದ ಕುರಿತು ಚರ್ಚಿಸಲೆಂದು ಪ್ರಶ್ನಾ ಅವಧಿಯನ್ನು ಮೊಟಕುಗೊಳಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಗದ್ದಲ ಎಬ್ಬಿಸಿದ ಪರಿಣಾಮ ಸಂಸತ್ತಿನ ಉಭಯ ಸದನಗಳನ್ನು ಮುಂದೂಡಲಾಗಿದೆ.

ವಿಶ್ವಾಸಮತದ ವೇಳೆ ವಿಜಯ ಸಾಧಿಸಲೆಂದು ಲಂಚ ನೀಡಲಾದ ಪ್ರಕರಣವನ್ನು ಬಯಲಿಗೆಳೆಯಲು ನೆರವಾದ ಬಿಜೆಪಿಯ ಇಬ್ಬರು ಸಂಸದರನ್ನು ಬಂಧಿಸಲಾಗಿದೆ. ಹಗರಣವನ್ನು ಬಯಲಿಗೆಳೆದವರು ಜೈಲಿನಲ್ಲಿದ್ದಾರೆ. ಹಗರಣದಲ್ಲಿ ಭಾಗಿಯಾದವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಲಾಗಿದೆ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಆರೋಪಿಸಿದರು.

ಓಟಿಗಾಗಿ ನೋಟು ನೀಡುವ ಪ್ರಹಸನ ವ್ಯವಸ್ಥೆ ಮಾಡಿದ್ದ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಹಾಗೂ ಸಂಸತ್ತಿನಲ್ಲಿ ಲಂಚ ಪ್ರಕರಣ ಬಯಲಿಗೆಳೆದಿದ್ದ ಬಿಜೆಪಿಯ ಇಬ್ಬರು ಮಾಜಿ ಸಂಸದರಾದ ಫಗಾನ್ ಸಿಂಗ್ ಕುಲಸ್ಥೆ ಮತ್ತು ಮಹಾವೀರ್ ಸಿಂಗ್ ಭಗೋರಾ ಅವರನ್ನು ಸೋಮವಾರ ಬಂಧಿಸಲಾಗಿತ್ತು.

ಬಿಜೆಪಿ ಸಂಸದರೇನೂ ತಪ್ಪು ಮಾಡಿಲ್ಲ. ಹಗರಣ ಬಯಲಿಗೆ ತರಲು ನೆರವಾಗಿದ್ದಾರಷ್ಟೇ. ಸಂಸದರು ಮಾಡಿದ್ದು ಸರಿ. ಅವರನ್ನು ಬಂಧಿಸುವುದಾದರೆ ನನ್ನನ್ನೂ ಬಂಧಿಸಬೇಕಾಗುತ್ತದೆ. ನನ್ನನ್ನೂ ಜೈಲಿನಲ್ಲಿ ಹಾಕಬೇಕಾಗುತ್ತದೆ ಎಂದು ಘರ್ಜಿಸಿದ ಆಡ್ವಾಣಿ, ಓಟಿಗಾಗಿ ನೋಟು ಪ್ರಕರಣದಲ್ಲಿ ಕುಟುಕು ಕಾರ್ಯಾಚರಣೆ ನಡೆದದ್ದು ತನಗೂ ತಿಳಿದಿತ್ತು ಎಂದು ಹೇಳಿದರು. ಕುಟುಕು ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಆಡ್ವಾಣಿ ಘೋಷಿಸಿದ್ದಾರೆ.

ಈ ಘೋಷಣೆಯು ಇದೀಗ ಸುಪ್ರೀಂ ಕೋರ್ಟಿನ ತೀವ್ರ ಒತ್ತಡದಿಂದಾಗಿ ಕಾರ್ಯಾಚರಣೆಗಿಳಿದು ಅಮರ್ ಸಿಂಗ್ ಮತ್ತು ಇಬ್ಬರು ಬಿಜೆಪಿ ಸಂಸದರನ್ನು ಬಂಧಿಸಿರುವ ಪೊಲೀಸರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದಂತಾಗಿದೆ. ಸಂಸದರಿಗೆ ಲಂಚ ನೀಡಿದ್ದು ಯಾರಿಗೋಸ್ಕರ (ಕಾಂಗ್ರೆಸ್ ನೇತೃತ್ವದ, ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರದ ರಕ್ಷಣೆ) ಎಂಬುದು ಎಲ್ಲರಿಗೂ ತಿಳಿದಿದ್ದರೂ, ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರತಿಪಕ್ಷಗಳ ವಾದಕ್ಕೆ ಬಲ ಬಂದಂತಾಗಿದೆ.

ಸರಕಾರ ಉಳಿಸಲು ಸಂಸದರಿಗೆ ಲಂಚ ನೀಡಲಾಗಿದೆ ಎಂಬುದನ್ನು ಒಪ್ಪಿ ಕೊಳ್ಳುವವರು ಯಾರು? ಎಂಬುದು ಕಾದು ನೋಡಬೇಕಾದ ಅಂಶ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಓಟಿಗಾಗಿ ನೋಟು, ಸಂಸತ್, ಪ್ರಧಾನಿ ಮನಮೋಹನ್ ಸಿಂಗ್, ಆಡ್ವಾಣಿ, ಬಿಜೆಪಿ, ಕನ್ನಡ ಸುದ್ದಿ, ಭಾರತ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ಕನ್ನಡ ವೆಬ್ ಸೈಟ್