ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೆ.13ಕ್ಕೆ ಇನ್ನೊಂದು ಸ್ಫೋಟ, ತಾಕತ್ತಿದ್ರೆ ತಡೆಯಿರಿ: ಐಎಂ (Delhi Blast | IM | Jihad | News in Kannada | Kannada Website)
ಸೆ.13ಕ್ಕೆ ಇನ್ನೊಂದು ಸ್ಫೋಟ, ತಾಕತ್ತಿದ್ರೆ ತಡೆಯಿರಿ: ಐಎಂ
ನವದೆಹಲಿ, ಶುಕ್ರವಾರ, 9 ಸೆಪ್ಟೆಂಬರ್ 2011( 09:48 IST )
ದೆಹಲಿ ಸ್ಫೋಟ ತಮ್ಮ ಕೈವಾಡ ಎಂದು ಉಗ್ರಗಾಮಿ ಸಂಘಟನೆ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಘೋಷಿಸಿಕೊಂಡ ಮರುದಿನ, ಇದು ನಮ್ಮ ಕೈವಾಡ ಎಂದು ಇಂಡಿಯನ್ ಮುಜಾಹಿದೀನ್ (ಐಎಂ) ಹೇಳಿಕೊಂಡಿದ್ದು ಗೊತ್ತೇ ಇದೆ. ಈ ಐಎಂ ಪರವಾಗಿ ಮೇಲ್ ಕಳುಹಿಸಿದ್ದು 'ಚೋಟೂ' ಎಂಬಾತ. ಆತ ಹೇಳುವ ಪ್ರಕಾರ, ಸೆಪ್ಟೆಂಬರ್ 13ರ ಮಂಗಳವಾರ ಮತ್ತೊಂದು ಸ್ಫೋಟ ಸಂಭವಿಸಲಿದೆಯಂತೆ. ತಾಕತ್ತಿದ್ದರೆ ನಮ್ಮನ್ನು ತಡೆಯಿರಿ ಎಂದೂ ಈ ಇಮೇಲ್ ಎಚ್ಚರಿಸಿದೆ!
ಸೆ.13ರಂದು ಜನಜಂಗುಳಿಯಿರುವ ಶಾಪಿಂಗ್ ಮಾಲ್‌ನಲ್ಲಿ ಸ್ಫೋಟ ನಡೆಸುತ್ತೇವೆ ಎಂದಿರುವ ಅದು, ದೆಹಲಿ ಸ್ಫೋಟದಲ್ಲಿ ಹುಜಿ ಪಾತ್ರವೇ ಇಲ್ಲ, ಇದನ್ನು ಇಂಡಿಯನ್ ಮುಜಾಹಿದೀನ್ ಯೋಜಿತವಾಗಿಯೇ ಮಾಡಿದ್ದು ಎಂದು chotoominani5 ಎಂಬ ಜಿಮೇಲ್ ಐಡಿಯಿಂದ ಬಂದಿರುವ ಇಮೇಲ್‌ನಲ್ಲಿ ತಿಳಿಸಲಾಗಿದೆ. ಬುಧವಾರ ನ್ಯಾಯಾಲಯದಲ್ಲಿ ಹೆಚ್ಚು ಜನರು ಬರುವುದರಿಂದ ಆ ದಿನವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದೂ ಇಮೇಲ್‌ನಲ್ಲಿ ತಿಳಿಸಲಾಗಿದೆ.
ವಾಸ್ತವವಾಗಿ ದೆಹಲಿ ಹೈಕೋರ್ಟಿನಲ್ಲಿ ಎಲ್ಲ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ವಿಚಾರಣೆ ಬುಧವಾರವೇ ನಡೆಯುತ್ತದೆ. ಬುಧವಾರ ನಡೆದ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿ 70ರಷ್ಟು ಮಂದಿ ಗಾಯಗೊಂಡಿದ್ದರು.
ಈ ಇಮೇಲ್, ಈ ಹಿಂದೆ ವಾರಣಾಸಿ ಮತ್ತು ಹಿಂದಿನ ಬಾರಿಯ ದೆಹಲಿ ಸ್ಫೋಟದ ಸಂದರ್ಭದಲ್ಲಿ ಬಂದಿದ್ದ ಇಂಡಿಯನ್ ಮುಜಾಹಿದೀನ್ ಇಮೇಲನ್ನು ಹೋಲುತ್ತಿರಲಿಲ್ಲ ಎಂದು ಮೂಲಗಳು ಹೇಳಿವೆ.
ಇದೇ ವೇಳೆ, ಈ ಹಿಂದೆ ಮೇ 25ರಂದು ಹೈಕೋರ್ಟ್‌ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನೂ ಸರಕಾರವು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ)ಗೆ ವಹಿಸಿದೆ.