ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಲೋ ಯುಪಿಎ, ನಿಮ್ಮನ್ನು ನಿದ್ದೆಯಿಂದ ಎಬ್ಬಿಸಲು ಏನು ಮಾಡ್ಬೇಕು?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ
(Supreme Court | UPA Govt | Kannada News | India News | Water Dispute)
ಹಲೋ ಯುಪಿಎ, ನಿಮ್ಮನ್ನು ನಿದ್ದೆಯಿಂದ ಎಬ್ಬಿಸಲು ಏನು ಮಾಡ್ಬೇಕು?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ
ನವದೆಹಲಿ, ಶುಕ್ರವಾರ, 9 ಸೆಪ್ಟೆಂಬರ್ 2011( 16:11 IST )
ಸುಪ್ರೀಂ ಕೋರ್ಟು ಮತ್ತೊಂದು ಬಾರಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ಚಾಟಿ ಬೀಸಿದೆ. ಯಾವಾಗ ನೀವು ನಿದ್ದೆಯಿಂದ ಎದ್ದೇಳುತ್ತೀರಿ ಎಂದು ಅದು ನೇರವಾಗಿ ಪ್ರಶ್ನಿಸಿದೆ.
ಅಂತಾರಾಜ್ಯ ಜಲ ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಟ್ರಿಬ್ಯೂನಲ್ ಒಂದನ್ನು ರಚಿಸುವ ನಿಟ್ಟಿನಲ್ಲಿ ನ್ಯಾಯಾಲಯ ನೀಡಿದ ಆದೇಶವನ್ನೇ ಪಾಲಿಸದಿರುವ ಕುರಿತು ಸುಪ್ರೀಂ ಕೋರ್ಟು ಗರಂ ಆಗಿತ್ತು. ನಾವು ನೀಡಿದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದೀರಿ. ಈ ದೀರ್ಘ ನಿದ್ರಾವಸ್ಥೆಯಿಂದ ಯಾವಾಗ ಎಚ್ಚೆತ್ತುಕೊಳ್ಳುತ್ತೀರಿ ಮತ್ತು ಎಚ್ಚರಗೊಳ್ಳಲು ಏನು ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ನ್ಯಾಯ ಪೀಠವು ನೇರವಾಗಿ ಪ್ರಶ್ನಿಸಿದೆ.
ಆಂಧ್ರ ಪ್ರದೇಶ ಮತ್ತು ಒರಿಸ್ಸಾ ನಡುವೆ ನದಿ ನೀರು ವಿವಾದದ ಪರಿಹಾರದ ಕುರಿತಾಗಿ ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಧೀಶರಾದ ಅಲ್ತಮಷ್ ಕಬೀರ್, ಎಸ್.ಎಸ್.ನಿಜ್ಜರ್ ಮತ್ತು ಜ್ಞಾನಸುಧಾ ಮಿಶ್ರಾ ಅವರ ನ್ಯಾಯಪೀಠವು ವಿಚಾರಣೆ ನಡೆಸುತ್ತಿತ್ತು.
ನಾವು ಆದೇಶಗಳನ್ನು ನೀಡುತ್ತಲೇ ಇದ್ದೇವೆ. ಸುಮ್ಮನೆ ಅಫಿದವಿತ್, ಮೇಲ್ಮನವಿಗಳನ್ನು ಸಲ್ಲಿಸುವುದರಲ್ಲಿ ಏನರ್ಥವಿದೆ? ಭಾರತ ಸರಕಾರದಿಂದ ಇದನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ನ್ಯಾಯಪೀಠ ಕಿಡಿ ಕಾರಿದೆ.
ಆಂಧ್ರ ಪ್ರದೇಶದ ಕಾಂಗ್ರೆಸ್ ಸರಕಾರವೇ ಸುಪ್ರೀಂ ಕೋರ್ಟ್ ಮೊರೆ ಹೋಗಿ, ಕೇಂದ್ರ ಸರಕಾರವು ವಂಶಧಾರಾ ಜಲ ವಿವಾದ ಮಂಡಳಿ ರಚಿಸುವ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಿದೆ ಎಂದು ದೂರು ನೀಡಿದ್ದುದು ವಿಶೇಷ. ಅದರ ವಿಚಾರಣೆ ನಡೆಯುತ್ತಿದ್ದ ಸಂದರ್ಭ ಕೇಂದ್ರಕ್ಕೆ ಮುಖಭಂಗವಾಗಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 20ರಂದು ನಡೆಯಲಿದೆ.