ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಸಮಿತಿಯ ಕೋಮು ಹಿಂಸೆ ಮಸೂದೆ: ಬಿಜೆಪಿ, ಮಮತಾ ತಿರಸ್ಕಾರ
(Communal Violence Bill | Mamata Banerjee | Sonia Gandhi | Kannada News, Latest News in Kannada)
ಸೋನಿಯಾ ಸಮಿತಿಯ ಕೋಮು ಹಿಂಸೆ ಮಸೂದೆ: ಬಿಜೆಪಿ, ಮಮತಾ ತಿರಸ್ಕಾರ
ನವದೆಹಲಿ, ಶನಿವಾರ, 10 ಸೆಪ್ಟೆಂಬರ್ 2011( 16:02 IST )
PTI
ಯುಪಿಎ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಕೋಮು ಹಿಂಸಾಚಾರ ತಡೆ ಕರಡು ಮಸೂದೆಗೆ ಪ್ರತಿಪಕ್ಷಗಳಿಂದ ಮಾತ್ರವೇ ಅಲ್ಲ, ಮಿತ್ರಪಕ್ಷಗಳಿಂದಲೂ ತೀವ್ರ ವಿರೋಧ ಎದುರಾಗುವುದರೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತೀವ್ರ ಹಿನ್ನಡೆ ಅನುಭವಿಸಿದೆ.
ಯುಪಿಎ ಅಧ್ಯಕ್ಷೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಸಿದ್ಧಪಡಿಸಿರುವ ಈ ಕೋಮು ಹಿಂಸಾಚಾರ ತಡೆ ಮಸೂದೆಯನ್ನು ವಿರೋಧಿಸಿದ ಯುಪಿಎಯ ಮೊದಲ ಮಿತ್ರ ಪಕ್ಷ, ತೃಣಮೂಲ ಕಾಂಗ್ರೆಸ್.
ನವದೆಹಲಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಏಕತಾ ಮಂಡಳಿ ಸಭೆ (ಎನ್ಐಸಿ)ಯಲ್ಲಿ ಬಿಜೆಪಿ ಮುಖಂಡರು, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂತಾದವರೆಲ್ಲರೂ ತೀವ್ರ ವಿರೋಧ ವ್ಯಕ್ತಪಡಿಸಿ, ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದ ಮಸೂದೆ ಎಂದು ಬಣ್ಣಿಸಿದರು.
ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ತಮಗೆ ಈ ಪ್ರಸ್ತಾಪಿತ ಮಸೂದೆಯ ಕರಡು ಪ್ರತಿಯನ್ನೇ ನೀಡಿಲ್ಲ ಎಂದರು.
ಅಲ್ಪಸಂಖ್ಯಾತ-ಬಹುಸಂಖ್ಯಾತರ ಮಧ್ಯೆ ತಿಕ್ಕಾಟಕ್ಕೆ ಕಾರಣ
PTI
ಹಿರಿಯ ಬಿಜೆಪಿ ಮುಖಂಡರೂ, ವಕೀಲರೂ ಆಗಿ ಅನುಭವ ಹೊಂದಿರುವ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರು ಯುಪಿಎ ಸರಕಾರದ ಈ ಕರಡು ಮಸೂದೆಯನ್ನು ಅಪಾಯಕಾರಿಯಾಗಿದ್ದು, ಜಾತ್ಯತೀತತೆಗೆ ವಿರೋಧವಾಗಿದೆ ಹಾಗೂ ಕೋಮುವಾದದ ಹೆಸರಿನಲ್ಲಿ ಅಸಮಾನತೆಗೆ ಕಾರಣವಾಗುತ್ತದೆ ಎಂದು ಟೀಕಿಸಿದರು.
ಇದು ಕೋಮುವಾದವನ್ನು ತಡೆಯುವ ಬದಲು, ಹೆಚ್ಚಿಸಲು ಕಾರಣವಾಗುತ್ತದೆ. ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತರ ನಡುವೆ ದ್ವೇಷ ಬಿತ್ತುತ್ತದೆ ಎಂದು ಅವರು ಹೇಳಿದರು. ಕರ್ನಾಟಕ, ಛತ್ತೀಸಗಢ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ ಮತ್ತು ಪಂಜಾಬ್ ಮುಖ್ಯಮಂತ್ರಿಗಳೆಲ್ಲರೂ ಇದನ್ನು ವಿರೋಧಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸದಾನಂದ ಗೌಡ
PTI
ಕೋಮು ಹಿಂಸಾಚಾರ ತಡೆ ಕಾಯ್ದೆಯು ಏಕಪಕ್ಷೀಯವಾಗಿದೆ. ಬಹುಸಂಖ್ಯಾತ ಸಮುದಾಯದವರು ಎಂದಿಗೂ ಬಲಿಪಶು ಆಗುವಂತಿಲ್ಲ, ಯಾವಾಗಲೂ ಅಲ್ಪಸಂಖ್ಯಾತರೇ ಬಲಿಪಶುಗಳು ಎಂದು ಸಾರುತ್ತದೆ. ರಾಜ್ಯಗಳಿಗೆ ಸಂಬಂಧಪಟ್ಟ ವಿಷಯದಲ್ಲಿ ಕೇಂದ್ರೀಯ ಕಾಯ್ದೆ ಜಾರಿಗೊಳಿಸುವುದೇ ಸಂವಿಧಾನದ ಆಶಯಕ್ಕೆ ವಿರುದ್ಧ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂತಹಾ ವಿವರಣೆಗಳು ಜನಾಕ್ರೋಶಕ್ಕೆ ತುಪ್ಪ ಎರೆಯುತ್ತದೆ ಮತ್ತು ಫೆಡರಲ್ ವ್ಯವಸ್ಥೆಗೇ ಧಕ್ಕೆ ತರುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ, ಹಿರಿಯ ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಈ ಮಸೂದೆಯು ಸರಕಾರದ ಮೇಲೆ ಅಪನಂಬಿಕೆ ಹುಟ್ಟು ಹಾಕಲು ಕಾರಣವಾಗುತ್ತದೆ. ಸಂಘಟಿತ ಕೋಮು ಹಿಂಸಾಚಾರದ ಬಗ್ಗೆ ಅದರಲ್ಲಿ ಸ್ಪಷ್ಟ ಉಲ್ಲೇಖವೇ ಇಲ್ಲ ಎಂದ ಅವರು, ರಾಜ್ಯ ಸರಕಾರಗಳ ಮೇಲೂ ನಂಬಿಕೆಯಿಡಿ. ಅವುಗಳನ್ನು ಬಲಪಡಿಸಿ. ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳಿಗಾಗಿ ರಾಜ್ಯ ಸರಕಾರಗಳನ್ನೇ ದುರ್ಬಲಗೊಳಿಸಿದರೆ, ಇಡೀ ದೇಶವೇ ದುರ್ಬಲವಾಗಿಬಿಡುತ್ತದೆ ಎಂದು ಚೌಹಾಣ್ ವಿವರಿಸಿದರು.
ಛತ್ತೀಸಗಢ ಬಿಜೆಪಿ ಮುಖ್ಯಮಂತ್ರಿ ರಮಣ್ ಸಿಂಗ್ ಈ ಕಾಯ್ದೆಯಡಿ ರಚಿಸಲಾಗುವ ರಾಷ್ಟ್ರೀಯ ಪ್ರಾಧಿಕಾರವು, ಯಾವುದೇ ತನಿಖೆಯಲ್ಲಿ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವ ಅಧಿಕಾರ ಹೊಂದಿರುತ್ತದೆ. ಇದು ಭಾರತದ ಫೆಡರಲ್ ವ್ಯವಸ್ಥೆಗೆ ವಿರುದ್ಧವಾದುದು. ಸೆಕ್ಷನ್ 9ರ ಪ್ರಕಾರ, ರಾಜ್ಯ ಸರಕಾರಗಳ ಸಂಸ್ಥೆಗಳೇ ಉದ್ದೇಶಪೂರ್ವಕವಾಗಿ ಧಾರ್ಮಿಕ ಹಿಂಸಾಚಾರವನ್ನು ಪ್ರಚೋದಿಸುತ್ತದೆ ಎಂಬ ಭಾವನೆ ಬರುತ್ತದೆ. ಪ್ರಜಾತಂತ್ರ ವ್ಯವಸ್ಥೆಯ ಮೇಲೆಯೇ ಅಪನಂಬಿಕೆಗೆ ಕಾರಣವಾಗುವ ಇಂತಹಾ ಅಂಶಗಳು ಇರಬಾರದು. ಇದು ಸರಕಾರಿ ನೌಕರರಿಗೆ ತಮ್ಮ ಕರ್ತವ್ಯ ನಿಭಾವಣೆಯಿಂದಲೂ ಹಿಂದೆ ಸರಿಯುವಂತೆ ಮಾಡಬಹುದು.
ವಿರೋಧ ಯಾಕೆ ಕೋಮು ಹಿಂಸಾಚಾರದಿಂದ ಕೆಲವು "ಸಮುದಾಯಗಳನ್ನು" ರಕ್ಷಿಸುವ ಉದ್ದೇಶ ಹೊಂದಿರುವ ಕರಡು ಮಸೂದೆಯಲ್ಲಿರುವ ಅಧ್ಯಾಯವೊಂದು, ಹಿಂಸಾಚಾರದ "ಬಲಿಪಶು ಗುಂಪು" ಎಂಬುದನ್ನು ಹೀಗೆ ವಿವರಿಸುತ್ತದೆ - "ಯಾವುದೇ ರಾಜ್ಯದಲ್ಲಿರುವ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು, ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು"!
ಈ ಮಸೂದೆಯನ್ನು ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿರುವ ಗುಜರಾತ್‌ನಲ್ಲಿ ನಡೆದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ ಎಂಬುದು ಬಿಜೆಪಿ ವಾದ. ಕೋಮು ಹಿಂಸಾಚಾರವನ್ನು ಬಹುಸಂಖ್ಯಾತ ಸಮುದಾಯದವರು ಮಾತ್ರವೇ ಮಾಡುತ್ತಾರೆ, ಅಲ್ಪ ಸಂಖ್ಯಾತರೆಂದಿಗೂ ಕೋಮು ಹಿಂಸಾಚಾರ ಮಾಡುವುದಿಲ್ಲ ಎಂಬ ನಂಬಿಕೆಯ ಆಧಾರದಲ್ಲಿ ಈ ಮಸೂದೆ ರೂಪಿಸಲಾಗಿದೆ ಎಂಬುದು ಬಿಜೆಪಿ ವಾದ.
ಈಗ ಸೋನಿಯಾ ಗಾಂಧಿ ನೇತೃತ್ವದ ಸಮಿತಿ ರೂಪಿಸಿರುವ ಈ ಕಾಯ್ದೆಯನ್ನು ಯುಪಿಎ ಮಿತ್ರಪಕ್ಷವೇ ಆಗಿರುವ ತೃಣಮೂಲ ಕಾಂಗ್ರೆಸ್, ಒರಿಸ್ಸಾದ ಬಿಜೆಡಿ, ಬಿಹಾರದ ಜೆಡಿಯು, ಮತ್ತು ಬಿಜೆಪಿ ಮುಖ್ಯಮಂತ್ರಿಗಳೆಲ್ಲರೂ ವಿರೋಧಿಸಿರುವುದರೊಂದಿಗೆ, ಈ ಮಸೂದೆಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ.