ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ: ಚಿದಂಬರಂ ಪಾತ್ರ ದೃಢೀಕರಿಸಿದ ಪ್ರಣಬ್ ಪತ್ರ (2G scam | Chidambaram | Pranab Mukherjee | UPA | A Raja | Telecom Minister | Government | BJP | Subramanium Swamy | Prakash Javadekar | Prime Minister)
2ಜಿ ಹಗರಣ: ಚಿದಂಬರಂ ಪಾತ್ರ ದೃಢೀಕರಿಸಿದ ಪ್ರಣಬ್ ಪತ್ರ
ನವದೆಹಲಿ, ಗುರುವಾರ, 22 ಸೆಪ್ಟೆಂಬರ್ 2011( 09:18 IST )
2ಜಿ ತರಂಗ ಗುಚ್ಚ ಹಗರಣದಲ್ಲಿ ಅಂದಿನ ವಿತ್ತಖಾತೆ ಸಚಿಪ ಪಿ.ಚಿದಂಬರಂ ಅವರ ಯಾವುದೇ ಕಾನೂನುಬಾಹಿರ ಪಾತ್ರವಿಲ್ಲವಾದ್ದರಿಂದ ತನಿಖೆ ನಡೆಸುವ ಅಗತ್ಯವಿಲ್ಲ. ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವ್ಯವಹಾರದ ರೂವಾರಿಯಾಗಿದ್ದಾರೆ ಎಂದು ಸಿಬಿಐ ಹೇಳಿಕೆ ನೀಡಿತ್ತು. ಆದರೆ, 2ಜಿ ಹಗರಣದಲ್ಲಿ ಪಿ.ಚಿದಂಬರಂ ಪಾತ್ರದ ಬಗ್ಗೆ ವಿತ್ತಸಚಿವ ಪ್ರಣಬ್ ಮುಖರ್ಜಿ ಅಪಸ್ವರ ಎತ್ತಿದ್ದರಿಂದ ಹಿರಿಯ ಸಚಿವರ ನಡುವೆ ತಿಕ್ಕಾಟ ಮತ್ತೊಂದು ರಾಜಕೀಯ ಸಮರಕ್ಕೆ ಸಿದ್ಧಗೊಂಡಂತಾಗಿದೆ.
ಪ್ರಸಕ್ತ ವರ್ಷದ ಮಾರ್ಚ್ ತಿಂಗಳಿನಲ್ಲಿ ಕೇಂದ್ರದ ವಿತ್ತಖಾತೆ ಸಚಿವಾಲಯ ಪ್ರಧಾನಮಂತ್ರಿ ಕಚೇರಿಗೆ 14 ಪುಟಗಳ ವರದಿಯನ್ನು ರವಾನಿಸಿದ್ದು, ಒಂದು ವೇಳೆ ಚಿದಂಬರಂ, ಮನಬಂದಂತೆ ದರ ನಿಗದಿಪಡಿಸಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವ ತಮ್ಮ ನಿಲುವಿಗೆ ಅಂಟಿಕೊಳ್ಳದೇ, 2ಜಿ ತರಂಗಾಂತರ ಹಂಚಿಕೆಯನ್ನು ಆನ್‌ಲೈನ್ ಮುಖಾಂತರ ಮಾಡಿದ್ದಲ್ಲಿ ಇಂತಹ ಸಂದಿಗ್ಧ ಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ಆರೋಪಿಸಿದ್ದಾರೆ.
2ಜಿ ತರಂಗ ಗುಚ್ಚ ದರ ನಿಗದಿಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಅಂದಿನ ವಿತ್ತಸಚಿವ ಪಿ.ಚಿದಂಬರಂ ಮತ್ತು ಮಾಜಿ ಟೆಲಿಕಾಂ ಸಚಿವ ಎ.ರಾಜಾ ಪಾತ್ರವಿದೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ.
ಕೇಂದ್ರ ಸರಕಾರದ ಹಿರಿಯ ಸಚಿವ ಪ್ರಣಬ್ ಮುಖರ್ಜಿ ಇದೀಗ, ಚಿದಂಬರಂ ವಿರುದ್ಧ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಉಂಟು ಮಾಡಿದ್ದು, ವಿಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ.
ವಿತ್ತಸಚಿವ ಪ್ರಣಬ್ ಮುಖರ್ಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ವಿರುದ್ಧ ನೇರವಾಗಿ ಆರೋಪ ಮಾಡಿದ್ದರಿಂದ ಚಿದಂಬರಂ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ತೀಕ್ಷ್ಣವಾಗಿ ಒತ್ತಾಯಿಸಿದೆ.
ಅಂದಿನ ವಿತ್ತಸಚಿವ ಪಿ.ಚಿದಂಬರಂ ಮಾಜಿ ಟೆಲಿಕಾಂ ಸಚಿವ ರಾಜಾ ಅವರಿಗೆ ಕಡಿವಾಣ ಹಾಕಿ 2ಜಿ ತರಂಗ ಗುಚ್ಚ ಹಂಚಿಕೆಯನ್ನು ಮತ್ತಷ್ಟು ಪಾರದರ್ಶಕವಾಗಿ ಮಾಡಬಹುದಿತ್ತು. ಪ್ರಧಾನಿ ಕಚೇರಿಗೆ ಕಳುಹಿಸುವ ಮೊದಲೇ ಚಿದಂಬರಂ ಅಂತಿಮ ನಿರ್ಧಾರ ತೆಗೆದುಕೊಂಡಿದ್ದರು ಎಂದು ಪ್ರಣಬ್ ಮುಖರ್ಜಿ ತಂಡ ಅಸಮಧಾನ ವ್ಯಕ್ತಪಡಿಸಿದೆ.
2ಜಿ ತರಂಗ ಗುಚ್ಚ ದರವನ್ನು ಅಪಮೌಲ್ಯದೊಂದಿಗೆ ಲೈಸೆನ್ಸ್‌ಗಳನ್ನು ಹರಾಜು ಮಾಡದೆ, ಅರ್ಹತೆಯಿಲ್ಲದ ಕಂಪೆನಿಗಳಿಗೆ 2ಜಿ ಲೈಸೆನ್ಸ್ ನೀಡಿದ್ದಾರೆ ಎನ್ನುವುದು ತಿಹಾರ್ ಜೈಲಿನಲ್ಲಿರುವ ಮಾಜಿ ಟೆಲಿಕಾಂ ಸಚಿವ ಎ.ರಾಜಾ ವಿರುದ್ಧದ ಆರೋಪವಾಗಿದೆ. ಆದರೆ, 2ಜಿ ತರಂಗಾಂತರ ಹಂಚಿಕೆ ನಿರ್ಧಾರದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಅಂದಿನ ವಿತ್ತಸಚಿವ ಪಿ.ಚಿದಂಬರಂ ಪಾತ್ರವಿದೆ ಎಂದ ಹಲವು ಬಾರಿ ಆರೋಪಿಸುತ್ತಲೇ ಇದ್ದಾರೆ.
ಸುಬ್ರಹ್ಮಣ್ಯಂ ಸ್ವಾಮಿ ವಾದಕ್ಕೆ ಪುಷ್ಠಿ 2ಜಿ ತರಂಗ ಗುಚ್ಚ ಹಗರಣದಲ್ಲಿ ಅಂದಿನ ವಿತ್ತಸಚಿವ ಪಿ.ಚಿದಂಬರಂ ಅವರ ಪಾತ್ರವೂ ಇದೆ ಎಂದು ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಸುಪ್ರೀಂಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಚಿದಂಬರಂ ವಿರುದ್ಧ ಪ್ರಣಬ್ ಮುಖರ್ಜಿ ಬರೆದ ಪತ್ರವನ್ನು, ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 2ಜಿ ಆರೋಪ ಪಟ್ಟಿಯಯಲ್ಲಿ ಚಿದಂಬರಂ ಹೆಸರನ್ನು ಸೇರ್ಪಡೆಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ವಕ್ತಾರ ಜಾವ್ಡೇಕರ್ ಟೀಕೆ ಕೇಂದ್ರ ಸರಕಾರದ ಹಿರಿಯ ಸಚಿವರಾದ ಪ್ರಣಬ್ ಮುಖರ್ಜಿ ಕೇಂದ್ರ ಗೃಹ ಸಚಿವರ ವಿರುದ್ಧ ಆರೋಪ ಮಾಡಿರುವುದು ಭಾರಿ ಬೆಳವಣಿಗೆಯಾಗಿದೆ. ಇದೀಗ, ಚಿದಂಬರಂ ಸಂಪೂರ್ಣವಾಗಿ 2ಜಿ ಸುಳಿಗೆ ಸಿಲುಕಿದ್ದಾರೆ. ದರ ನಿಗದಿಯಲ್ಲಿ ರಾಜಾ ಅವರನ್ನು ಹಿಂದಿಕ್ಕಿ ಪಾರದರ್ಶಕವಾಗಿ ನಡೆಸಿದ್ದಲ್ಲಿ ಇಂತಹ ಹಗರಣ ಹೊರಬರುತ್ತಿರಲಿಲ್ಲ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವ್ಡೇಕರ್ ಕಿಡಿಕಾರಿದ್ದಾರೆ.