ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಪ್ರಕರಣದಲ್ಲಿ ಚಿದಂಬರಂ ಸಾಕ್ಷಿಯಾಗಲಿ: ಎ. ರಾಜಾ (2G spectrum scam | A Raja | P Chidambaram | Supreme Court | CBI)
2ಜಿ ಪ್ರಕರಣದಲ್ಲಿ ಚಿದಂಬರಂ ಸಾಕ್ಷಿಯಾಗಲಿ: ಎ. ರಾಜಾ
ನವದೆಹಲಿ, ಮಂಗಳವಾರ, 27 ಸೆಪ್ಟೆಂಬರ್ 2011( 09:09 IST )
PTI
2ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತಾವೇ ವಾದಿಸಿದ ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಸುಪ್ರೀಂಕೋರ್ಟ್ ಮತ್ತು ಸಿಬಿಐ ಮಾಡಿದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದೇನೆ. ಸಾಕ್ಷಿಧಾರರಾಗಿ ಕೇಂದ್ರ ಗೃಹ ಸಚಿವ ಚಿದಂಬರಂ ಅವರನ್ನು ನ್ಯಾಯಾಲಯಕ್ಕೆ ಕರೆಸಬೇಕು ಎಂದು ಮನವಿ ಮಾಡಿದರು.
ತಮ್ಮ ಟೆಲಿಕಾಂ ನೀತಿಯಿಂದಾಗಿ ಕೇಂದ್ರ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿದೆ ಎನ್ನುವ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದಾರೆ.
ರಾಜಾ ಪರ ವಕೀಲರಾದ ಸುಶೀಲ್ ಕುಮಾರ್ ವಾದವನ್ನು ಮುಂದುವರಿಸಿ, ಅಂದಿನ ವಿತ್ತಖಾತೆ ಸಚಿವ ಮತ್ತು ಇಂದಿನ ಕೇಂದ್ರ ಗೃಹ ಸಚಿವ ಚಿದಂಬರಂ, 2ಜಿ ತರಂಗ ಗುಚ್ಚ ದರ ನಿಗದಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗಿಯಾಗಿದ್ದರಿಂದ ಅವರನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಬೇಕು ಎಂದು ಕೋರಿದರು.
ಚಿದಂಬರಂ ಅವರನ್ನು ಆರೋಪಿಯಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನಾವು ಹೇಳುತ್ತಿಲ್ಲ. ಆದರೆ, 2ಜಿ ತರಂಗ ಗುಚ್ಚದ ಸಂಪೂರ್ಣ ಮಾಹಿತಿಯಿರುವುದರಿಂದ ಅವರನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಕರೆಸುವಂತೆ ಕೋರುತ್ತಿದ್ದೇವೆ ಎಂದು ವಾದ ಮಂಡಿಸಿದರು.
2003ರಲ್ಲಿ ಸಚಿವ ಸಂಪುಟ ಸಭೆಯಲ್ಲಿ 2ಜಿ ತರಂಗ ಗುಚ್ಚದ ಲೈಸೆನ್ಸ್ ಹಂಚಿಕೆ ಹಾಗೂ ದರ ನಿಗದಿಪಡಿಸಲಾಗಿದೆ. ಆದ್ದರಿಂದ, ಜಸವಂತ್ ಸಿಂಗ್ ಅವರನ್ನು ಕೂಡಾ ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ಮಾಜಿ ಸಚಿವ ಎ.ರಾಜಾ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.